ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ಅಸ್ತವ್ಯಸ್ಥಗೊಂಡು ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಾದ ಜನರ ಆರೋಗ್ಯವನ್ನು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಆಸ್ಪತೆಗೆ ದಾಖಲಾದ ಹತ್ತು ಜನರ ಆರೋಗ್ಯವನ್ನು ವಿಚಾರಿಸಿದರು. ನಂತರ ವೈದ್ಯಾಧಿಕಾರಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕೆಂದರು.
ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ ಅವರು, ಬ್ಯಾಲ್ಯಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ವಾಂತಿ, ಭೇದಿಯಿಂದ ಬಳಲುತ್ತಿದ್ದಾರೆ. ಶನಿವಾರದಿಂದಲೇ ನಮ್ಮ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ. ಆಸ್ಪತ್ರೆಗೆ ಬರುವ ಎಲ್ಲರಿಗೂ ಸೂಕ್ತವಾದ ಚಿಕಿತ್ಸೆ ನೀಡಿ ಉಪಚರಿಸಲಾಗುತ್ತಿದೆ. ಈಗಾಗಲೇ ಕೆಲವರು ಆರಾಮವಾಗಿ ಮನೆಗೆ ತೆರಳಿದ್ದಾರೆ. ಈಗ ಮಕ್ಕಳು ಸೇರಿದಂತೆ ಹತ್ತು ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆಲವರು ಇಟಗಿ ಗ್ರಾಮದಲ್ಲಿರುವ ಆರೋಗ್ಯ ಕೇಂದ್ರದಲ್ಲಿಯೂ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ, ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಅಪ್ಪಾಸಾಬ ಇನಾಮದಾರ, ಡಾ.ಮುಸ್ತಖಾ, ಡಾ.ಬಸವರಾಜ ಝಳಕಿ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೇಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಜಶೇಖರ ಚಿಂಚೋಳ್ಳಿ ಇತರರು ಇದ್ದರು.
ನಂತರ ಬಾಲ್ಯಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡ ಪಾಟೀಲ ಅವರು ಗ್ರಾಮಸ್ಥರ ಆರೋಗ್ಯವನ್ನು ವಿಚಾರಿಸಿದರು. ಗ್ರಾಮಸ್ಥರಿಗೆ ಕಲುಷಿತ ನೀರು ಪೂರೈಕೆಯ ಬೋರವೆಲ್ ಬಂದ್ ಮಾಡಬೇಕು. ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಸಬೇಕು. ಜನರ ಆರೋಗ್ಯದ ಬಗ್ಗೆ ನಿಗಾವಹಿಸಬೇಕೆಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಿಡಗುಂದಿ ತಾಪಂ ಇಓ, ಬಾಬುಗೌಡ ಪಾಟೀಲ ಇತರರು ಇದ್ದರು.

