ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ ನಾಗರ ಪಂಚಮಿ ಹಬ್ಬವನ್ನು ಜನರು ಶ್ರದ್ದಾ ಭಕ್ತಿಯಿಂದ ಸಂಭ್ರಮದಿಂದ ಆಚರಿಸಿದರು.
ಸೋಮವಾರ ಮನೆಯಲ್ಲಿ ಮನೆಯ ಎಲ್ಲ ಸದಸ್ಯರ ಹೆಸರು ಹೇಳುವ ಮೂಲಕ ನಾಗದೇವರಿಗೆ ಹಾಲು ಎರೆಯುವ ಮೂಲಕ ಒಳಗಡೆ ಹಾಲು ಎರೆಯುವ ಹಬ್ಬವನ್ನು ಆಚರಿಸಿದ್ದರು. ಇಂದು ಮನೆಯ ಹೊರಗೆ ಹಾಲು ಎರೆಯುವ ಹಬ್ಬವಿರುವದರಿಂದಾಗಿ ಪಟ್ಟಣದ ಬಸವೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಸವ ತೀರ್ಥ ಬಳಿಯಿರುವ ಅರಳಿ ಮರ ಹಾಗೂ ಬನ್ನಿಮರದ ಕೆಳಗೆ ಇರುವ ನಾಗದೇವನಿಗೆ, ಮಹಾರಾಜ ಮಠದ ಹತ್ತಿರವಿರುವ ನಾಗದೇವತೆ, ವೀರಭದ್ರೇಶ್ವರ ನಗರದಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನದಲ್ಲಿರುವ ನಾಗದೇವತೆ ಮೂರ್ತಿಗೆ ಸೇರಿದಂತೆ ವಿವಿಧ ದೇವಸ್ಥಾನದಲ್ಲಿರುವ ಕಲ್ಲುನಾಗದೇವರಿಗೆ ಸುಮಂಗಲೆಯರು ತಮ್ಮ ಮಕ್ಕಳೊಂದಿಗೆ ಸೇರಿ ನಾಗದೇವನಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ನಾಗದೇವತೆ ಇರುವ ದೇವಸ್ಥಾನಗಳ ಕಡೆಗೆ ಸುಮಂಗಲೆಯರು ತೆರಳಿ ಪಂಚಮಿ ಹಬ್ಬದಂಗವಾಗಿ ತಯಾರಿಸಿದ ವಿವಿಧ ಬಗೆಯ ಸಿಹಿ ತಿಂಡಿಗಳು, ಖಾದ್ಯಗಳು ದೇವರಿಗೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆದರು. ಪಂಚಮಿ ಹಬ್ಬದಂಗವಾಗಿ ಮಹಿಳೆಯರು ಮಕ್ಕಳು ಹೊಸ ಬಟ್ಟೆ ಧರಿಸಿ ಮನೆಗಳಲ್ಲಿ ಕಟ್ಟಿರುವ ಜೋಕಾಲಿ ಜೀಕಿ ಸಂಭ್ರಮ ಪಡುವ ದೃಶ್ಯ ಸಾಮಾನ್ಯವಾಗಿತ್ತು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುವಕರು ಲಿಂಬೆ ಹಣ್ಣ ಎಸೆಯುವದು ಸೇರಿದಂತೆ ವಿವಿಧ ಗ್ರಾಮೀಣ ಭಾಗದ ಆಟಗಳಲ್ಲಿ ತಲ್ಲೀನರಾಗಿರುವದು ಕಂಡು ಬಂದಿತ್ತು.

