ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿದ್ಯಾರ್ಥಿಗಳ ಭದ್ರ ಬುನಾದಿ ಮತ್ತು ಮುಂದಿನ ಭವಿಷ್ಯಕ್ಕಾಗಿ, ಶೈಕ್ಷಣಿಕ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಇಂದಿನಿಂದ ಆರಂಭವಾಗಿದ್ದು, ಪಟ್ಟಣದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ತೆರಳಿ ಮೊದಲ ದಿನದ ಪ್ರಥಮ ಭಾಷಾ ಪರೀಕ್ಷೆ ಯಶಸ್ವಿಯಾಗಿ ಬರೆದರು.
ಮೊದಲ ದಿನದ ಭಾಷಾ ವಿಷಯ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಕನ್ನಡ ಮಾಧ್ಯಮದ ಬಹುತೇಕರಿಗೆ ಕನ್ನಡ ಪರೀಕ್ಷೆ. ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಉರ್ದು ಪರೀಕ್ಷೆ ಉಳಿದಂತೆ ಆಯಾ ಮಾಧ್ಯಮಗಳ ವಿಷಯದ ಪರೀಕ್ಷೆ ನಡೆಯಿತು. ವಿದ್ಯಾರ್ಥಿಗಳು ಸುಸೂತ್ರವಾಗಿ ಬರೆಯಲು ಬೇಕಾದ ಎಲ್ಲಾ ಭದ್ರತಾ ಕ್ರಮಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿದ್ದು.
ಎಲ್ಲಾ ಕೇಂದ್ರಗಳಲ್ಲಿ ಹೊರ ಭಾಗದಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಸಹಿತವಾಗಿ ಕೊಠಡಿ ಮಾಹಿತಿ ಸೂಚನೆ ಫಲಕಗಳಲ್ಲಿ ಲಭ್ಯವಿದ್ದವು. ಕೊಠಡಿಯ ಒಳಗಿನ ಡೆಸ್ಕ್ ಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಬರೆಯಲಾಗಿತ್ತು.
ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಪ್ರತಿಯೊಂದು ಕೊಠಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಪಟ್ಟಣದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 891 ವಿದ್ಯಾರ್ಥಿಗಳ ಪೈಕಿ 839 ವಿದ್ಯಾರ್ಥಿಗಳು ಹಾಜರಾದರು. 52 ವಿದ್ಯಾರ್ಥಿಗಳು ಗೈರಾಜರಾದರು.