ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ಮತ್ತು ತರಬೇತಿ ಕಾರ್ಯಾಚರಣೆ ಬುಧವಾರ ಯಶಸ್ವಿಯಾಗಿ ಜರುಗಿತು.
ರಾಜ್ಯ ಕಂದಾಯ ಇಲಾಖೆ, ಬೆಳಗಾವಿಯ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹು ಸಂಸ್ಥೆಗಳ ನಡುವೆ ವಿಪತ್ತು ಸಿದ್ದತೆ ಮತ್ತು ಪ್ರತಿಕ್ರಿಯೆ ಸಮನ್ವಯವನ್ನು ಹೆಚ್ಚಿಸಲು ಈ ವ್ಯಾಯಾಮವು ಕುಸಿದ ರಚನೆ ಹುಡುಕಾಟ ಮತ್ತು ರಕ್ಷಣೆ (ಸಿಎಸ್‌ಎಸ್‌ಆರ್) ಮೇಲೆ ಕೇಂದ್ರೀಕರಿಸಿದೆ ಎಂದು ಎನ್‌ಡಿಆರ್‌ಎಫ್ ತಂಡದ ಕಮಾಂಡರ್ ಶಾಂತಿಲಾಲ್ ಜಟಿಯಾ ಹೇಳಿದರು.
ಅಣಕು ಪ್ರದರ್ಶನ ಬೆಂಕಿಯ ತುರ್ತು ಪರಿಸ್ಥಿತಿಗಳು ಮತ್ತು ಸ್ಥಾವರದೊಳಗಿನ ಕಟ್ಟಡ ಕುಸಿತದ ಸನ್ನಿವೇಶಗಳನ್ನು ಅನುಕರಿಸಿತು. ಈ ವೇಳೆ ಸಿಐಎಸ್‌ಎಫ್ ತಂಡವು ಬೆಂಕಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದು ಮತ್ತು ರಕ್ಷಣಾ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಬಲಿಪಶುಗಳನ್ನು ಪತ್ತೆ ಹಚ್ಚಲು ಎನ್‌ಡಿಆರ್‌ಎಫ್ ಶೋಧ ತಂಡ ಭೌತಿಕ, ತಾಂತ್ರಿಕ ಮತ್ತು ಶ್ವಾನದಳದ ಮೂಲಕ ಶೋಧಕಾರ್ಯ ನಡೆಸಿತು. ಇದೇವೇಳೆ ಕಟಿಂಗ್ ತಂಡವು ಕಿಟಕಿ, ಕಬ್ಬಿಣದ ಗೇಟ್ ಮತ್ತು ಗೋಡೆಯನ್ನು ಕಿತ್ತಿ ಮೊದಲ ಮಹಡಿಯಿಂದ ಐದು ಬಲಿಪಶುಗಳನ್ನು ಸಂರಕ್ಷಿಸಿತು. ಹೆಚ್ಚುವರಿಯಾಗಿ ಎರಡನೇ ಮಹಡಿಯಿಂದ ಮೂವರನ್ನು ರಕ್ಷಿಸಲಾಯಿತು. ಮತ್ತು ಇತರ ನಾಲ್ವರನ್ನು ಹಗ್ಗ ಬಳಸಿಕೊಂಡು ನಾಲ್ಕನೇ ಮಹಡಿಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಈ ವೇಳೆ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಎನ್‌ಟಿಪಿಸಿ ಎಕ್ಸ್ಕ್ಯೂಟಿವ್ ಡೈರೆಕ್ಟರ್ ಬಿದ್ಯಾನಂದ್ ಝಾ ಮಾತನಾಡಿ, ಎನ್‌ಡಿಆರ್‌ಎಫ್ ನೇತೃತ್ವದ ರಕ್ಷಣಾ ಕಾರ್ಯಾಚರಣೆಯನ್ನು ಎನ್‌ಟಿಪಿಸಿ ಪರಿವಾರ ವೀಕ್ಷಿಸಲು ಸುವರ್ಣ ಅವಕಾಶ ಒದಗಿಸಿದಂತಾಯಿತು. ತುರ್ತು ಪರಿಸ್ಥಿತಿಗಳಿಗೆ ಸಂಸ್ಥೆಯ ಕಲಿಕೆ ಮತ್ತು ಸಿದ್ದತೆಯನ್ನು ಹೆಚ್ಚಿಸುವಲ್ಲಿ ಇಂಥ ತರಬೇತಿಗಳು ಹೆಚ್ಚು ಪ್ರಯೋಜನಕಾರಿಯಾಗಲಿವೆ ಎಂದರು.
ಎನ್‌ಡಿಆರ್‌ಎಫ್ ತಂಡದ ಹೆಡ್ ಕಾನ್ಸಟೇಬಲ್ ಯು.ನವೀನ್, ಕೊಲ್ಹಾರ ತಹಶೀಲ್ದಾರ್ ಎಸ್.ಎಸ್. ನಾಯಕಲಮಠ, ಎನ್‌ಟಿಪಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಪೂಜಾ ಪಾಂಡೆ, ಸಂಶೋಧಕಿ ಮಧು ಪಾಟೀಲ, ಸ್ಥಾವರದ ಹಿರಿಯ ಅಧಿಕಾರಿಗಳು, ವಿಪತ್ತು ನಿರ್ವಹಣಾ ಸಂಯೋಜಕರು, ಸ್ಥಳೀಯ ಆಡಳಿತ, ಸಿಐಎಸ್‌ಎಫ್ ಸಿಬ್ಬಂದಿ, ಕಾರ್ಮಿಕರು ಸೇರಿದಂತೆ ೨೦೦ ಕ್ಕೂ ಅಧಿಕ ಜನರು ಭಾಗವಹಿಸಿದ್ದರು.