ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಮಹಾ ದಾಸೋಹಿ ಶರಣಬಸವೇಶ್ವರರ 59 ನೇ ಜಾತ್ರೋತ್ಸವ, 25 ನೇ ಮಹಾ ರಥೋತ್ಸವದ ಅಂಗವಾಗಿ ಬುಧವಾರ ಸಾಯಂಕಾಲ ಸದ್ಭಕ್ತರು ರಥೋತ್ಸವವನ್ನು ಎಳೆಯುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು. ಭಗವಂತ ನೀಡಿದ ಶಕ್ತಿ, ಸಾಮರ್ಥ್ಯಗಳನ್ನು ಮಾನವ ಜನಾಂಗದ ಉದ್ಧಾರಕ್ಕಾಗಿ ಬಳಸಿಕೊಂಡು”ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್” ಎಂಬ ಮಾತಿನಂತೆ ಜನೋಪಕಾರ ಮಾಡಿ ಜೀವನದಲ್ಲಿ ಸಾರ್ಥಕತೆ ಮೆರೆದ ಕೋಟಿಗೊಬ್ಬ ಶರಣ, ಭಕ್ತರ ಆರಾಧ್ಯ ದೈವ ದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ಸಾವಿರಾರು ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆಯಿಂದ ಭಕ್ತರೆಲ್ಲರೂ ಸೇರಿ ಬಣ್ಣ ಬಣ್ಣದ ಪುಷ್ಪಗಳಿಂದ ಅಪ್ಪನ ತೇರು ಶೃಂಗೇರಿ ಸವಾಲಾಗಿತ್ತು, ಹಲವು ಧಾರ್ಮಿಕ ಪೂಜಾ ವಿಧಿ ವಿಧಾನಗಳು ಸಂಪ್ರದಾಯದಂತೆ ನೆರವೇರಿಸಿ, ರಥದೋಳ ಶರಣಬಸವೇಶ್ವರರ ಮೂರ್ತಿ ಕೂಡಿಸಿ, ಕಳಸಾರೋಹಣವಾಗುತ್ತಿದ್ದಂತೆ, ಭಕ್ತಜನರ ಹರ್ಷೋದ್ಗಾರ, ಜಯಘೋಷ, ಮುಗಿಲು ಮುಟ್ಟಿತ್ತು ತಂಡೋಪತಂಡವಾಗಿ ಬಂದ ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು, ಹಾರಿಸಿ ಭಕ್ತಿ ಭಾವ ಸಮರ್ಪಿಸಿದರು, ಮಕ್ಕಳು, ಮಹಿಳೆಯರು, ವೃದ್ದರು, ಸೇರಿದಂತೆ ಸರ್ವರೂ ಹೊಸ ಬಟ್ಟೆ ಧರಿಸಿ ಕೊಂಡು ಉತ್ಸಾಹದಿಂದ ಮದ್ಯಾಹ್ನ 4 ಗಂಟೆಯಿಂದ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡು ಸಂಜೆ 6 -30 ಗಂಟೆಗೆ ನಡೆದ ರಥೋತ್ಸವವನ್ನು ಭಕ್ತಸಮೂಹ ಕಣ್ತುಂಬಿಕೊಂಡು ಪುನಿತರಾದರು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಈಡುಗಾಯಿ ಒಡೆದು ಹರಕೆ ತೀರಿಸಿದರು, ಇದೆ ಸಮಯದಲ್ಲಿ ಅಪ್ಪನ ಗುಡಿಯಿಂದ ಅನೇಕ ಸದ್ಭಕ್ತರು ಶ್ರೀಶೈಲ ಪಾದಯಾತ್ರೆ ಕೈಗೊಂಡರು, ಫೆಬ್ರವರಿ 26 ಶಿವರಾತ್ರಿ ಜಾಗರಣೆಯೆಂದು ಪ್ರಾರಂಭವಾದ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಮಾರ್ಚ್ 19 ಬುಧವಾರ ರಾತ್ರಿ ಮಹಾಮಂಗಲದೊಂದಿಗೆ ಸಂಪನ್ನಗೊಂಡಿತು. ಪುರಾಣಿಕ ವಡಿಗೇರಿಯ ನಾಗಯ್ಯಸ್ವಾಮಿ, ಹಿರೇಮಠದ ಪೀಠಾಧಿಪತಿ ಶ್ರೀ ಷ ಬ್ರ ಚನ್ನಬಸವ ಶಿವಾಚಾರ್ಯರು, ರಾಜಶೇಖರಯ್ಯ ಹಿರೇಮಠ, ಚೆನ್ನಯ್ಯ ಸ್ವಾಮಿ ಚಿಕ್ಕಮಠ, ಮಾಜಿ ಜಿಪಂ ಅಧ್ಯಕ್ಷೆ ಸಿದ್ದನಗೌಡ ಪೊಲೀಸ್ ಪಾಟೀಲ, ಅರುಣೋದಯ ಸೊನ್ನದ, ಮುದಕಣ್ಣ ಸಾಹು, ಮಹಿಪಾಲರೆಡ್ಡಿ ಡಿಗ್ಗಾವಿ, ಖ್ಯಾತ ಕಲಾವಿದರಾದ ಬಸವರಾಜ ಬಂಟನೂರ, ಹಾಗೂ ಯಮನೇಶ ಯಾಳಗಿ, ಸಿದ್ದಣ್ಣ ಆಲ್ದಾಳ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸದ್ಭಕ್ತರು, ಗಣ್ಯರು, ಹಿರಿಯರು, ಭಾಗವಹಿಸಿದ್ದರು, ಪೋಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆಯನ್ನು ಕೈಗೊಂಡಿತು. ವಿಶೇಷವಾಗಿ ಮಂಗಳವಾರ ಸಾಯಂಕಾಲ ಮಹಿಳೆಯರು ಉಚ್ಚಾಯಿ ರಥೋತ್ಸವವನ್ನು ಎಳೆದು ಪುನೀತರಾದರು.