ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಬಹಳ ಹಳೆಯ ಕಥೆ ಇದು. ಒಂದೇ ಊರಿನ ಹತ್ತು ಜನ ಸ್ನೇಹಿತರು ತೀರ್ಥಯಾತ್ರೆಗೆ ತೆರಳಿದ್ದರು. ಸುಮಾರು ಆರು ತಿಂಗಳುಗಳ ಕಾಲ ತೀರ್ಥಯಾತ್ರೆಯನ್ನು ಪೂರೈಸಿ ಮರಳಿ ಊರಿಗೆ ಹೊರಟ ಸಮಯವದು. ಒಂದು ದಿನ ಮುಂಜಾನೆಯ ನಿತ್ಯವಿಧಿಗಳನ್ನು ಪೂರೈಸಿ ಅಡುಗೆ ಮಾಡಿಕೊಂಡು ಊಟ ಮಾಡಿ ಉಳಿದೆಲ್ಲ ಗಂಟು ಗದಡಿಗಳನ್ನು ಕಟ್ಟಿಕೊಂಡು ಅವರು ಹೊರಟರು. ಮಾರ್ಗಮಧ್ಯದಲ್ಲಿ ದೊಡ್ಡ ನದಿಯೊಂದನ್ನು ಅವರು ದಾಟಬೇಕಾಗಿತ್ತು. ನದಿಯೇನೋ ದೊಡ್ಡದು, ಆದರೆ ಬೇಸಿಗೆಯ ಕಾರಣ ನದಿಯ ಪಾತ್ರ ಕಿರಿದಾಗಿದ್ದು ಸೊಂಟದವರೆಗೂ ನೀರು ಇದ್ದ ಆ ನದಿಯನ್ನು ದಾಟಲು ಯಾವುದೇ ರೀತಿಯ ತೆಪ್ಪವಾಗಲಿ ದೋಣಿಯಾಗಲಿ ಇರಲಿಲ್ಲ.ಪರಸ್ಪರ ತಾವು ತಾವೇ ಮಾತಾಡಿಕೊಂಡು ತಮ್ಮೆಲ್ಲ ಸಾಮಾನುಗಳನ್ನು ತಲೆಯ ಮೇಲೆ ಇಟ್ಟುಕೊಂಡು ಕೈ ಕೈ ಹಿಡಿದುಕೊಂಡು ಅವರೆಲ್ಲರೂ ನಿಧಾನವಾಗಿ ನದಿಯನ್ನು ದಾಟಿದರು. ಯಾವುದೇ ತೊಂದರೆ ಇಲ್ಲದೆ ಹರಿಯುವ ನದಿಯನ್ನು ದಾಟಿದ ಅವರು ಸಮಾಧಾನದ ನಿಟ್ಟುಸಿರು ಬಿಡುತ್ತಿರುವಾಗಲೇ ಅವರಲ್ಲೇ ಓರ್ವ ವ್ಯಕ್ತಿ ನಾವು ಒಟ್ಟು ಹತ್ತು ಜನರಿದ್ದೆವು. ಅಪ್ಪಿ ತಪ್ಪಿ ಯಾರಾದರೂ ನದಿಯಲ್ಲಿ ತೇಲಿಕೊಂಡು ಹೋಗಿದ್ದರೆ ಎಣಿಸಿ ನೋಡೋಣ ಎಂದು ಹೇಳಲು ಎಲ್ಲರೂ ಹೌದು ಹಾಗೆಯೇ ಮಾಡೋಣ ಎಂದು ತಲೆಯಾಡಿಸಿದರು.
ಇದೀಗ ಮೊದಲು ಹೇಳಿದ ವ್ಯಕ್ತಿ ತನ್ನನ್ನು ಬಿಟ್ಟು ಎಲ್ಲರನ್ನೂ ಎಣಿಸಿದಾಗ ಕೇವಲ ಒಂಬತ್ತು ಜನರಿದ್ದರು.
ಅರೆ! ನಾವು ಕೇವಲ 9 ಜನರಿದ್ದೇವೆ… ಹಾಗಾದರೆ ನಮ್ಮಲ್ಲಿ ಒಬ್ಬ ವ್ಯಕ್ತಿ ನದಿಯಲ್ಲಿ ತೇಲಿ ಹೋಗಿರಬಹುದು ಎಂದು ಶಂಕಿಸಿ ಅವರೆಲ್ಲ ದುಃಖದಿಂದ ಜೋರಾಗಿ ಅಳಲಾರಂಭಿಸಿದರು.
ಆ ಹಾದಿಯಲ್ಲಿ ಹೋಗುತ್ತಿದ್ದ ಓರ್ವ ವ್ಯಕ್ತಿ ಏನಾಯಿತು ಎಂದು ಕೇಳಲು ನಡೆದ ವಿಷಯವನ್ನು ಅವರೆಲ್ಲರೂ ಹೇಳಿದರು.

ಆಗ ಆ ವ್ಯಕ್ತಿ ನೀವು ಒಟ್ಟು ಹತ್ತು ಜನರೇ ಇರುವಿರಲ್ಲ ಎಂದು ಹೇಳಿದಾಗ ಅವರು ಮತ್ತೆ ತಮ್ಮಲ್ಲಿಯೇ ಎಣಿಸಿ ಇಲ್ಲ ನಾವು 9 ಜನರು ಇದ್ದೇವೆ. ನಮ್ಮಲ್ಲಿ ಒಬ್ಬರು ತೇಲಿಕೊಂಡು ಹೋಗಿದ್ದಾರೆ ಎಂದು ಮತ್ತೆ ದುಃಖಿಸಲಾರಂಭಿಸಿದರು. ಅದೆಷ್ಟೇ ತಿಳಿ ಹೇಳಿದರೂ ಅರಿಯದ ಅವರ ಮೌಢ್ಯವನ್ನು ಕಂಡು ಆ ವ್ಯಕ್ತಿ ತನ್ನಲ್ಲೇ ಗೊಣಗಿಕೊಳ್ಳುತ್ತಾ ಅಲ್ಲಿಂದ ಹೊರಟು ಹೋದನು.
ಕನ್ನಡಿಯ ಪರಿಚಯವೂ ಇಲ್ಲದ ಅವರ ಕಾಲದಲ್ಲಿ ಒಬ್ಬೊಬ್ಬರಾಗಿ ನೀರಿನಲ್ಲಿ ಇಳಿದು ತಮ್ಮ ಮುಖವನ್ನು ನೋಡಿಕೊಂಡು ತಮ್ಮಲ್ಲಿ ಯಾರು ಕಾಣೆಯಾಗಿದ್ದಾರೆ ಎಂದು ಚರ್ಚಿಸಿದರಾದರೂ ಅವರಿಗೆ ಗೊತ್ತಾಗಲೇ ಇಲ್ಲ. ಇದೀಗ ನದಿಯಲ್ಲಿ ತೇಲಿ ಹೋದ ವ್ಯಕ್ತಿಯ ಅವಶೇಷಗಳು ಸಿಗಬಹುದೇ ಎಂದು ನದಿಯಲ್ಲಿ ಹುಡುಕಲು ಪ್ರಯತ್ನಿಸಿದರು. ಯಾವ ಅವಶೇಷಗಳೂ ಅವರಿಗೆ ದೊರೆಯದೆ ಹೋಯಿತು. ಸತ್ತಿದ್ದರೆ ತಾನೇ ದೊರೆಯುವುದು!
ಇಲ್ಲಿ ಪ್ರತಿಯೊಬ್ಬರೂ ತಮ್ಮನ್ನು ಬಿಟ್ಟು ಉಳಿದ 9 ಜನರನ್ನು ಎಣಿಸುತ್ತಿದ್ದರು. ಹೀಗಾಗಿ ಕೇವಲ ಒಂಬತ್ತು ಜನರ ಲೆಕ್ಕ ಮಾತ್ರ ಸಿಗುತ್ತಿತ್ತು. ತಾನು ಹತ್ತನೆಯ ವ್ಯಕ್ತಿ ಎಂಬ ಅರಿವು ಅವರಿಗೆ ಆಗಲೇ ಇಲ್ಲ.
ಇವರಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಸೋತು ಹೋದ ದಾರಿಹೋಕ ವ್ಯಕ್ತಿ ಮತ್ತೆ ಬರಲು ಆತನಿಗೆ ನದಿಯಲ್ಲಿ ಯಾವ ಅವಶೇಷಗಳು ದೊರೆಯದ ಕುರಿತು ಈ ಹತ್ತು ಜನ ಹೇಳಲು ಆತ ಗಟ್ಟಿಯಾಗಿ ನಕ್ಕು ಹೀಗೆ ಹೇಳಿದನು
‘ ನೋಡಿ, ನಿಮ್ಮಲ್ಲಿ ಯಾರಾದರೂ ಒಬ್ಬರು ಮುಂದೆ ಬನ್ನಿ’ ಎಂದು ಹೇಳಲು ಮೊದಲು ಎಲ್ಲರನ್ನು ಎಣಿಸಿದ ವ್ಯಕ್ತಿ ಮುಂದೆ ಬಂದನು.
ಕೂಡಲೇ ಆ ದಾರಿಹೋಕ ಮೊದಲು ನಿನ್ನನ್ನು ಗಣನೆಗೆ ತೆಗೆದುಕೊಂಡು ಎಣಿಸಿ ನಂತರ ಉಳಿದವರನ್ನು ಎಣಿಸು ಎಂದು ಹೇಳಿದನು. ದಾರಿಹೋಕನು ಹೇಳಿದಂತೆ ಮೊದಲ ವ್ಯಕ್ತಿ ತನ್ನನ್ನು ಮೊದಲನೇ ವ್ಯಕ್ತಿ ಎಂದು ಪರಿಗಣಿಸಿದಾಗ ಸರಿಯಾದ ಲೆಕ್ಕ ಅವರಿಗೆ ದೊರೆತು ತಾವು ಹತ್ತು ಮಂದಿ ಇರುವುದಾಗಿ ಅವರಿಗೆ ಅರಿವಾಯಿತು.
ಅಲ್ಲಿಯೇ ಇದ್ದ ಇನ್ನೊಬ್ಬ ವ್ಯಕ್ತಿ , ಆಗಲೂ ನಾವು ಇಷ್ಟೇ ಜನ ಇದ್ದವು.. ಆದರೂ ಅದು ಹೇಗೆ ಲೆಕ್ಕ ತಪ್ಪಿತು ಎಂದು ಕೇಳಿದನು.
ಉತ್ತರವಾಗಿ ದಾರಿಹೋಕನು “ನಿಜ, ಆಗಲೂ ನೀವು ಇಷ್ಟೇ ಜನ ಇದ್ದಿರಿ, ಆದರೆ ನೀವು ಉಳಿದವರೆಲ್ಲರನ್ನು ಪರಿಗಣಿಸಿ ನಿಮ್ಮನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ ಆದ್ದರಿಂದ ನಿಮ್ಮ ಗಣಿಸುವಿಕೆ ಒಂಬತ್ತು ಎಂದು ತೋರಿಸಿತ್ತು.. ಈಗಲಾದರೂ ಅರ್ಥವಾಯಿತಲ್ಲ ಎಂದಾಗ ಸಂತಸದಿಂದ ತಲೆಯಾಡಿಸಿದ ಅವರೆಲ್ಲ ಆತನಿಗೆ ಕೃತಜ್ಞತೆ ಹೇಳಿದರು.
ನಮ್ಮೆಲ್ಲರ ಬದುಕು ಹೀಗೆ ಅಲ್ಲವೇ ಸ್ನೇಹಿತರೆ?
ನಾವು ಕೂಡ ಮೇಲಿನ ಹತ್ತು ಜನ ಸ್ನೇಹಿತರಲ್ಲಿ ಒಬ್ಬರಾಗಿದ್ದೇವೆ. ಬೇರೆಯವರನ್ನು ಪರಿಗಣಿಸುವ ನಾವು ವೈಯಕ್ತಿಕವಾಗಿ ನಮ್ಮನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ.
ನಮ್ಮ ಸುತ್ತಣ ಹತ್ತು ಹಲವು ಜನರ ಕುರಿತು ಯೋಚಿಸುವ, ಮಾತನಾಡುವ, ಕಾಳಜಿ ಮಾಡುವ ನಾವುಗಳು ಸ್ವತಹ ನಮ್ಮನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಬೇರೆಯವರಿಗಾಗಿ ಭೂರಿ ಭೋಜನವನ್ನು ಸಿದ್ಧಪಡಿಸುವ ಹೆಣ್ಣು ಮಕ್ಕಳು ತಮಗೊಬ್ಬರಿಗೆ ಒಂದು ಬಟ್ಟಲು ಅನ್ನ ಮಾಡಿಕೊಳ್ಳುವುದಿಲ್ಲ. ಮನೆಯ ಪ್ರತಿ ಮೂಲೆ ಮುಡುಕುಗಳನ್ನು ಸ್ವಚ್ಛಗೊಳಿಸಿ ಮನೆಯನ್ನು ಲಕಲಕಿಸುವಂತೆ ಇಡುವ ಹೆಣ್ಣು ಮಕ್ಕಳು ತಮ್ಮ ವೈಯುಕ್ತಿಕ ಕಾಳಜಿಯ ವಿಷಯ ಬಂದಾಗ ಗಂಡನ, ಮಕ್ಕಳ ಮತ್ತು ಕುಟುಂಬದ ನೆಪವೊಡ್ಡಿ ಹಿಂದೇಟು ಹಾಕುತ್ತಾರೆ.
ಯಾರಿಗೇ ಆಗಲಿ ಅವಕಾಶಗಳು ಪದೇ ಪದೇ ದೊರೆಯುವುದಿಲ್ಲ, ಹಾಗೆ ದೊರೆತ ಅವಕಾಶಗಳನ್ನು ಬಿಟ್ಟುಬಿಡುವವರಿಗೆ ಮುಂದೆ ಅಂತಹ ಅವಕಾಶಗಳು ದೊರೆಯುತ್ತವೆಯೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಆದರೆ ಸಿಕ್ಕ ಅವಕಾಶಗಳನ್ನು ಕಳೆದುಕೊಂಡು ನಂತರ ಹಲಬುವ ಜನರಿಗೆ ಏನೆಂದು ಹೇಳಬೇಕು.
ಬಹುಶಹ ನಮ್ಮೆಲ್ಲರ ಬದುಕು ಹಾಗೆಯೇ ನಡೆಯುತ್ತಿದೆ. ಚಿಕ್ಕ ಮಕ್ಕಳಿದ್ದಾಗ ಯೌವನವನ್ನು ಬಯಸುವ ನಾವು ಯೌವ್ವನದಲ್ಲಿ ಜವಾಬ್ದಾರಿ ಮತ್ತು ಒತ್ತಡಗಳಿಲ್ಲದ ಮಧ್ಯ ವಯಸ್ಸನ್ನೂ ಮತ್ತು ಮಧ್ಯ ವಯಸ್ಸಿನಲ್ಲಿ ವೃದ್ಧಾಪ್ದದ ಆರಾಮದಾಯಕ ಜೀವನವನ್ನು ಮತ್ತು ಅಂತಿಮವಾಗಿ ವೃದ್ಧಾಪ್ಯದಲ್ಲಿ ಬಾಲ್ಯದ ಜೀವನದ ಕನವರಿಸುತ್ತೇವೆ. ಇರುವಾಗ ಇದ್ದುದನ್ನು ಅನುಭವಿಸದೆ ಬೇರೊಂದಕ್ಕೆ ಆಶಿಸಿ ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ತ್ರಿಶಂಕು ಸ್ಥಿತಿಯಲ್ಲಿ ಉಳಿದುಬಿಡುತ್ತೇವೆ. ನಾವು ವರ್ತಮಾನದಲ್ಲಿ ಜೀವಿಸುವುದನ್ನೇ ಕಲಿತಿಲ್ಲ ಎಂಬಷ್ಟು ಭವಿಷ್ಯದ ಕುರಿತ ಯೋಜನೆ, ಭೂತದಲ್ಲಿ ನಡೆದುಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿನ ಅಂಗಳಕ್ಕೆ ತಂದು ನಿಟ್ಟುಸಿರು ಬಿಡುವ, ಗತವೈಭವಗಳನ್ನು ನೆನೆದು ಕಣ್ಣೀರಿಡುವ ನಮ್ಮ ಮನಸ್ಥಿತಿಗೆ ಏನೆನ್ನಬೇಕು?.
ನಾವು ಆರೋಗ್ಯವಾಗಿದ್ದರೆ, ನಾವು ಗಟ್ಟಿ ಮುಟ್ಟಾಗಿದ್ದು ನಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳುವಷ್ಟು ಸಶಕ್ತರಾಗಿರಬೇಕು. ಎಲ್ಲರಿಗೂ ಎಲ್ಲವನ್ನೂ ಮಾಡುವ ನಾವು ನಮಗಾಗಿಯೂ ತುಸು ಸಮಯವನ್ನು ಮೀಸಲಿಡಬೇಕು. ನಾವು ಹುಟ್ಟುವುದಕ್ಕಿಂತ ಮುಂಚೆಯಿಂದಲೂ ಇರುವ ಈ ಪ್ರಪಂಚ ನಾವು ಸತ್ತ ನಂತರವೂ ಇರುತ್ತದೆ. ನಮ್ಮ ಇರುವಿಕೆಯೇ ನಗಣ್ಯವಾಗಿರುವ ಈ ಪ್ರಪಂಚದಲ್ಲಿ ಬೇರೆಯವರಿಗಾಗಿ ದುಡಿಯುವ ನಾವು ನಮ್ಮ ವೈಯುಕ್ತಿಕ ಕಾಳಜಿ, ಆಸೆ ಆಕಾಂಕ್ಷೆಗಳ ಪೂರೈಕೆಗಾಗಿ ನಮ್ಮ ಆರೋಗ್ಯ ಮತ್ತು ಹಿತ ಸಾಧನೆಗಾಗಿ ಬಳಸಲೇಬೇಕು. ನಮ್ಮ ಮನವ ದೈಹಿಕ ಆರೋಗ್ಯ ಸರಿಯಾಗಿಲ್ಲದಿದ್ದರೆ ನಾವು ಬೇರೆಯವರಿಗೆ ಏನು ಮಾಡಲು ಸಾಧ್ಯ?
ಬೇರೆಯವರ ಕಾಳಜಿಯಲ್ಲಿ ನಮ್ಮನ್ನು ನಾವು ಮರೆಯಬಾರದು ಎಂಬುದಕ್ಕೆ ಮೇಲಿನ ಕಥೆಯೇ ನಮ್ಮ ಬದುಕಿಗೆ ಉದಾಹರಣೆಯಾಗಬೇಕು..
ಏನಂತೀರಾ ಸ್ನೇಹಿತರೆ?


