ಮುಸ್ಲಿಂ ಕುಟುಂಬದಿಂದ ಕಳೆದ ನಾಲ್ಕು ವರ್ಷಗಳಿಂದ ಬಸವ ಜಯಂತಿ ಆಚರಣೆ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ದಲಿತ ಬಲಿತ ಎಂಬ ಭೇದ ಬೇಡ, ಮನುಜರೆಲ್ಲ ಒಂದೇ ಕುಲ ಎಂಬ ತತ್ವದಡಿ ವಿಶ್ವ ಭ್ರಾತೃತ್ವ ಸಾರಿದ ಮಹಾನ್ ಮಾನವತಾವಾದಿ ಶರಣ ಜಗಜ್ಯೋತಿ ಬಸವಣ್ಣ ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.
ಬೆಂಗಳೂರಿನ ಆಡುಗೋಡಿ ಪೊಲೀಸ್ ಗೃಹದಲ್ಲಿರುವ ಆರಕ್ಷಕ ಮೌಲಾಲಿ ಶ್ವಾನದಳದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧರ್ಮದಲ್ಲಿ ಮುಸ್ಲಿಂನಾದರೂ ಕೂಡ ಪ್ರತಿ ವರ್ಷ ಬಸವ ಜಯಂತಿ ದಿನದಂದು ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವದಿಂದ ನಮಿಸಿ, ಸಕಲರ ಒಳಿತಿಗಾಗಿ ಪ್ರಾರ್ಥಿಸಿ, ತನ್ನ ಮೂರು ಮಕ್ಕಳಿಗೂ ಬಸವಣ್ಣನ ಸಮಸಮಾಜದ ಚಿಂತನೆ ಕುರಿತು ತಿಳಿಸುತ್ತಾರೆ. ಕಳೆದ 4 ವರ್ಷಗಳಿಂದ ಬಸವ ಜಯಂತಿಯನ್ನು ತಮ್ಮ ಮನೆಯಲ್ಲಿಯೇ ಭಕ್ತಿ, ಭಾವ, ಶ್ರದ್ಧೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ.
12ನೇ ಶತಮಾನದಲ್ಲಿ ಆಳವಾಗಿ ಬೇರೂರಿದ ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆ, ಅಸ್ಪೃಶ್ಯತೆ, ಅನಾಗರಿಕತೆ, ಲಿಂಗ ತಾರತಮ್ಯದ ವಿರುದ್ಧ ವಚನ ಕ್ರಾಂತಿ ಕೈಗೊಂಡ ಬಸವಣ್ಣ, ದಯ, ಕರುಣೆ, ಸಮಾನತೆ, ಸಹಬಾಳ್ವೆ ಪ್ರತಿಪಾದಿಸಿದ್ದಾರೆ. ಜ್ಞಾನ ಭಂಡಾರ ಹೊತ್ತ ಬಸವಣ್ಣ ಒಂದೇ ಜಾತಿ ಧರ್ಮಕ್ಕೆ ಸೀಮಿತವಾದವರಲ್ಲ ಹೀಗಾಗಿ ಇವರ ಜಯಂತಿ ಆಚರಣೆ ನನಗೆ ನಾಡ ಹಬ್ಬದಂತೆ ಎನ್ನುತ್ತಾರೆ ಮೌಲಾಲಿ.
ಜಯಂತಿ ಆಚರಣೆಯಲ್ಲಿ ಮಹಮದ್ ಜುಬೇರ, ಮಹಮ್ಮದ್ ಜಯಾನ್, ಖತಾಲಸಾಬ, ರೆಹಮಾನ್, ಜುನೇರಾ ಪಾಲ್ಗೊಂಡಿದ್ದರು.

