ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಜಗದ್ಗುರು ರೇಣುಕಾಚಾರ್ಯರ ಕುರಿತಾದ ಸಮಗ್ರ ಮಾಹಿತಿಯನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂದು ಜಡಿಮಠದ ಜಡಿಸಿದ್ಧೇಶ್ವರಶ್ರೀ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕು ಆಡಳಿತದ ಅಡಿಯಲ್ಲಿ ಬುಧವಾರ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರೇಣಕಾಚಾರ್ಯರು ಪರಶಿವನ ಪಂಚಬ್ರಹ್ಮ ಮುಖದಿಂದ ಆವಿರ್ಭವಿಸಿದ ಪಂಚಾಚಾರ್ಯರರಲ್ಲಿ ಪ್ರಥಮ ಗಣೇಶ್ವರರಾಗಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮೌಲ್ಯವನ್ನು ಜಗಕ್ಕೆ ಸಾರಿದರು ಎಂದರು.
ತಹಶೀಲ್ದಾರ ಪ್ರಕಾಶ ಸಿಂದಗಿ, ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಬಸಯ್ಯ ಮಲ್ಲಿಕಾರ್ಜುನಮಠ ಮಾತನಾಡಿ, ಇಂದು ಸಮಾಜದ ಅಸಮಾನತೆಗಳನ್ನು ಹೋಗಲಾಡಿಸಲು ರೇಣುಕಾಚಾರ್ಯರು ಸೇರಿದಂತೆ ಎಲ್ಲ ಮಹನೀಯರ ಉದಾತ್ತ ವಿಚಾರಗಳನ್ನು ಅರಿಯಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೇಣುಕರ ಭಾವಚಿತ್ರಕ್ಕೆ ಶಾಸ್ತ್ರೋಕ್ತ ಪೂಜೆ, ಪುಷ್ಪವೃಷ್ಠಿ ನೆರವೇರಿಸಿ ಮಂಗಳಾರತಿಯೊಂದಿಗೆ ಪ್ರಸಾದ ವಿತರಿಸಲಾಯಿತು.
ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಬಂಡೆಪ್ಪಗೌಡ ಬಿರಾದಾರ(ದಿಂಡವಾರ), ಕೆ.ಎಸ್. ಕೋರಿ, ಗಣೇಶ ಹಿರೇಮಠ, ಗಂಗಾಧರ ಬಬಲೇಶ್ವರ, ಮಹೇಶ ಬುದ್ನಿ, ಬಸವರಾಜ ತಾಳಿಕೋಟಿ, ಆನಂದ ಪರದೇಶಿಮಠ, ಡಾ.ಮಂಜುನಾಥ ಮಠ, ರಮೇಶ ಮಶಾನವರ, ಶ್ರೀಶೈಲ ದಾನಗೊಂಡ, ರಾಮು ದೇಸಾಯಿ, ಕುಮಾರಸ್ವಾಮಿ ಹಿರೇಮಠ, ಆನಂದ ಜಡಿಮಠ, ಶಿವಪ್ಪ ವಸ್ತçದ, ಭದ್ರಯ್ಯ ಮಲ್ಲಿಕಾರ್ಜುನಮಠ. ಸೇರಿದಂತೆ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿ ಇದ್ದರು.