ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಸಂಪೂರ್ಣ ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗಿದೆ. ಮಾರ್ಚ್ 27 ರಂದು ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಎಂದೆಂದೂ ಕಂಡು ಕೇಳರಿಯದ ಉಗ್ರ ಹೋರಾಟಕ್ಕೆ ಸಜ್ಜಾಗಿದೆ. ತಮ್ಮ ರಕ್ತವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಾರ್ಸಲ್ ಮಾಡಲು ಮುಂದಾಗಿದೆ.
ಪಟ್ಟಣದಲ್ಲಿ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕಿನ ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆಯ ಸದಸ್ಯರು, ಪದಾಧಿಕಾರಿಗಳು ರಕ್ತ ಕರಪತ್ರ ಚಳುವಳಿ ನಡೆಸಿದರು. ಸಂಪೂರ್ಣ ಒಳಮೀಸಲಾತಿ ಜಾರಿ ಮಾಡುವಂತೆ ತಮ್ಮ ರಕ್ತದಲ್ಲಿ ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಸ್ಪೀಡ್ ಪೋಸ್ಟ್ ಮಾಡಿದರು. ಅಲ್ಲದೆ ಮಾರ್ಚ್ 27 ರಂದು ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳದಿದ್ದರೆ, ರಾಜ್ಯದಲ್ಲಿರುವ ಮಾದಿಗ ಸಮುದಾಯದ ಜನ, ತಮ್ಮ ದೇಹದಿಂದ 100 ಎಂಎಲ್ ರಕ್ತ ತೆಗೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪೀಡ್ ಪೋಸ್ಟ್ ಮಾಡಬೇಕೆಂದು ಕರೆ ನೀಡಿದರು.
ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಸದಸ್ಯ ಕೆ.ಟಿ ಹರೀಶ್ ಮಾತನಾಡಿ, ಕಳೆದ 35 ವರ್ಷಗಳಿಂದಲೂ ಮಾದಿಗಸಮುದಾಯ ಒಳಮೀಸಲಾತಿ ಜಾರಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ. ಇದಕ್ಕಾಗಿ ಸಮುದಾಯದ ಮುಖಂಡರು ಬೆವರಿನ ಜೊತೆಗೆ ರಕ್ತ ಕೂಡ ಸುರಿಸಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡಲು ಮೀನಾಮೇಷ ಏಣಿಸುತ್ತಿದೆ. ಮಾರ್ಚ್ 27 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲೂ ಒಳಮೀಸಲಾತಿ ಜಾರಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಮಾದಿಗ ಸಮುದಾಯ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಸದಸ್ಯ ಪ್ರಕಾಶ್ ಹಿರೇಹಳ್ಳಿ ಮಾತನಾಡಿ, ಕಳೆದ ಮೂರುವರೆ ದಶಕಗಳಿಂದಲೂ ಮಾದಿಗರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಸುಪ್ರಿಂಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ ಮಾದಿಗರಿಗೆ ಶೇ.6ರಷ್ಟುಒಳ ಮೀಸಲಾತಿ ನೀಡಿದ ಕಡತಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟರಿಗೆ ನೀಡಿದ ಶೇ.17ರಲ್ಲಿ ಕಾನೂನು ತೊಡಕಾಗುತ್ತದೆ ಎಂಬ ನೆಪವೊಡ್ಡಿ ಶೇ.15ಕ್ಕೆ ಇಳಿಸಿ 56 ಸಾವಿರ ಹುದ್ದೆ ಭರ್ತಿ ಮಾಡಲು ಹೊರಟಿರುವುದು ಮಾದಿಗ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಹೀಗಾಗಿ ಸರ್ಕಾರ ಮಾಡುತ್ತಿರುವ ಮೋಸದ ಬಗ್ಗೆ ರಕ್ತ ಕರಪತ್ರ ಚಳುವಳಿ ಮೂಲಕ ಮಾದಿಗ ಸಮುಯದಯಕ್ಕೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಉಪಾಧ್ಯಕ್ಶ ಸುಭಾಸ್ ಚಂದ್ರ, ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಕಾರ್ಯದರ್ಶಿ ನಾಗರಾಜು ಮೊಳೆಯೂರು ಉಪಸ್ಥಿತರಿದ್ದರು.

