ರಾಜ್ಯದಲ್ಲಿ ಉಪ ಚುನಾವಣೆ ಹಿನ್ನೆಲೆ | ಮಾರ್ಚ್ 26 ರಂದು ಕಲಾಪದ ನಂತರ ಸದನ ಅನಿರ್ದಿಷ್ಟಾವಧಿ ಮುಂದೂಡಿಕೆ | ಸ್ಪೀಕರ್ ಯು ಟಿ ಖಾದರ್ ಪ್ರಕಟ
ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಮಾರ್ಚ್ 26 ರಂದು ಮುಕ್ತಾಯಗೊಳಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸುವುದರೊಂದಿಗೆ ಮಾರ್ಚ್ 6 ರಂದು ಆರಂಭವಾದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವು ಮಾರ್ಚ್ 27 ರಂದು ಮುಕ್ತಾಯಗೊಳ್ಳಬೇಕಿತ್ತು.
ವಿಧಾನಸಭೆಯ ಕಲಾಪ ಸಲಹಾ ಸಮಿತಿ (BAC) ಸಭೆಯ ನಂತರ ಸ್ಪೀಕರ್ ಯು ಟಿ ಖಾದರ್ ಅವರು ಮಂಗಳವಾರ ಸದನದಲ್ಲಿ ಈ ವಿಷಯ ಪ್ರಕಟಿಸಿದರು.
ಕಲಾಪ ಸಮಿತಿ ಸಭೆ ನಿರ್ಧಾರದಂತೆ ಇಂದು (ಮಾರ್ಚ್ 24) ಬಜೆಟ್ ಮತ್ತು ಬೇಡಿಕೆಗಳ ಮೇಲಿನ ಚರ್ಚೆ ಮುಕ್ತಾಯವಾಗಲಿದೆ. ಈ ಚರ್ಚೆಗಳಿಗೆ ಮಾರ್ಚ್ 26 ರಂದು ಸಿಎಂ ಉತ್ತರ ನೀಡಲಿದ್ದು, ನಂತರ ಧನವಿನಿಯೋಗ ವಿಧೇಯಕವನ್ನು ಚರ್ಚೆಗೆ ತೆಗೆದುಕೊಂಡು ಅಂಗೀಕರಿಸಲಾಗುವುದು. ಮಾರ್ಚ್ 26 ರಂದು ಕಲಾಪದ ನಂತರ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದು ಎಂದು ಸ್ಪೀಕರ್ ತಿಳಿಸಿದರು.
ಅಧಿವೇಶನವನ್ನು ಒಂದು ದಿನ ಮುಂಚಿತವಾಗಿ ಯಾಕೆ ಮುಕ್ತಾಯಗೊಳಿಸಲಾಗುತ್ತಿದೆ ಎಂದು ಸ್ಪೀಕರ್ ಹೇಳದಿದ್ದರೂ ನಾಯಕರು, ಸಚಿವರು ಮತ್ತು ಶಾಸಕರು ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ಮುಂಬರುವ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಪ ಚುನಾವಣೆಯಿಂದಾಗಿ ಅಧಿವೇಶನದ ಅವಧಿ ಮೊಟಕುಗೊಳ್ಳಬಹುದು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೋಮವಾರ ಹೇಳಿದ್ದರು.

ಏಪ್ರಿಲ್ 9 ರಂದು ಉಪಚುನಾವಣೆ
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಾದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಏಪ್ರಿಲ್ 9 ರಂದು ಉಪಚುನಾವಣೆ ನಡೆಯಲಿದೆ.
ಹಿರಿಯ ಕಾಂಗ್ರೆಸ್ ಶಾಸಕರಾದ ಎಚ್ ವೈ ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಅನಿವಾರ್ಯವಾಗಿದೆ.

