ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ ೧೯೮೯ ಪ್ರತಿಬಂಧಕ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸ್ಮಶಾನ ಭೂಮಿ ಸಿಗುವುದೇ ಕಷ್ಟ. ಹಾಗಾಗಿ ಸ್ಮಶಾನ ಭೂಮಿ ಒತ್ತುವರಿ ಸರ್ವೆ ಮಾಡಿ, ಬೇಲಿ ಅಳವಡಿಸಿ, ಹದ್ದುಬಸ್ತ್ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದೌರ್ಜನ್ಯ ನಿಯಂತ್ರಣ ೧೯೮೯ ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿದ್ದುಕೊಂಡು ಮಾತು ಕೇಳಿಸಿಕೊಂಡು ಹೋಗುವುದಲ್ಲ. ನಿಮ್ಮ ಹಂತದಲ್ಲಿ ಪರಿಹಾರ ಕಲ್ಪಿಸಬೇಕು. ಸ್ಮಶಾನ ಭೂಮಿ ಸಿಗುವುದೇ ಕಷ್ಟ. ಹಾಗಾಗಿ ಅದಕ್ಕೆ ಪರಿಹಾರ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.
ಎಲ್ಲೆಲ್ಲಿ ಸ್ಮಶಾನ ಸಮಸ್ಯೆ ಇದ್ದಲ್ಲಿ ಸಂಬಂಧಿಸಿದವರ ಗಮನಕ್ಕೆ ತರಬೇಕು. ಈ ಸಭೆಯಲ್ಲಿ ಚರ್ಚೆಯಾದ ವಿಷಯ ಹಾಗೂ ಸಮಸ್ಯೆಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು ಎಂದರು.
ವಸತಿ ನಿಲಯಗಳಲ್ಲಿ ಸ್ವಚ್ಚತೆ ಹಾಗೂ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದುಕೊಳ್ಳಲು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಆರೋಗ್ಯ ಇಲಾಖೆಯಲ್ಲಿ ಸಂಪರ್ಕ ಸಂವಹನ ಸಾಧಿಸಲು ಹೆಲ್ಪಲೈನ್ ಸ್ಥಾಪಿಸಿ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪ.ಜಾತಿ ಹಾಗೂ ಪ.ಪಂ ಜಮೀನಿನಲ್ಲಿ ವಿದ್ಯುತ್ ಕಂಬಗಳ ಎಲ್ ಟಿ ವೈಯರ್ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಫಾಲೋಅಪ್ ಮಾಡಿ, ಸ್ವಾವಲಂಬಿ ಸಾರಥಿ ಯೋಜನೆಯಡಿ ನಿಯಮಾನುಸಾರ ಫಲಾನುಭವಿಗಳಿಗೆ ಬ್ಯಾಂಕ್ ಸಹಾಯಧನ ಬಿಡುಗಡೆ ಮಾಡಿ ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಕೃಷಿಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಹೆಸ್ಕಾಂ ಅಧಿಕ್ಷಕ ಅಭಿಯಂತರರಾದ ಸಿದ್ದಪ್ಪ ಬಿಂಜಗೇರಿ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಭಿಷೇಕ ಚಕ್ರವರ್ತಿ, ಮದನಕುಮಾರ ನಾಗರದಿನ್ನಿ, ನಾನು ಸೋಮು ಲಮಾಣಿ, ರವಿಕಾಂತ ಬಿರಾದಾರ, ಸಿದ್ದು ರಾಯಣ್ಣರವರ,ಯಮನಪ್ಪ ಸಿದರಡ್ಡಿ, ಮಲ್ಲು ತಳವಾರ, ರಾಜಶೇಖರ ಕೂಚಬಾಳ ಹಾಗೂ ಮಲ್ಲಪ್ಪ ಹಾದಿಮನಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

