ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಕಾಗವಾಡ: ತಾಲೂಕಿನ ಕವಲಗುಡ್ಡ ಹೊರ ವಲಯದಲ್ಲಿರುವ ಈಶ್ವರ್ ದುಂಡಪ್ಪ ತೆಗ್ಗಿನವರ ಇವರ ಮನೆಗೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ ಭೇಟಿ ನೀಡಿ ಪರಿಶೀಲಿಸಿದರು.
ತಗ್ಗಿನವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಆಕಸ್ಮಿಕ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಇದನ್ನು ಮನಗಂಡು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಭೇಟಿಮಾಡಿ ಮನೆಯವರೊಂದಿಗೆ ಸಂದರ್ಶಿಸಿದಾಗ ಅಲ್ಲಿ ಯಾವುದೇ ರೀತಿಯ ಭಾನಾಮತಿ ಹಾಗೂ ಮಾಟ ಮಂತ್ರ ಇರುವುದಿಲ್ಲ. ಆತ್ಮವಿಶ್ವಾಸದಿಂದ ಧನಾತ್ಮಕ ಚಿಂತನೆ ಮಾಡಿದರೆ ಯಾವುದೇ ಭಯ ಬೇಡ ಎಂದು ಮನೆಯವರಿಗೆ ಆತ್ಮಸ್ಥೈರ್ಯ ನೀಡಿ ಬಹು ವರ್ಷಗಳಿಂದ ಕಂಡು ಬಂದಿರುವ ಸಮಸ್ಯೆಗೆ ಪರಿಹಾರ ನೀಡಲಾಯಿತು.
ಈ ವೇಳೆ ಹುಲಿಕಲ್ ನಟರಾಜ ಮಾತನಾಡಿ, ಬಾನಾಮತಿ ಎಂಬುದು ಶತ್ರುಗಳಿಗೆ ಹಾನಿ ಮಾಡಲು ಅನಾರೋಗ್ಯ ತರಲು ಅಥವಾ ಕುಟುಂಬಗಳನ್ನು ಸರ್ವನಾಶ ಮಾಡಲು ನಡೆಸುವ ಕೆಟ್ಟ ಪ್ರಯೋಗ ಎಂಬ ಭಯ ಜನರಲ್ಲಿದೆ. ಇದರ ಭಯಕ್ಕೆ ಬಿದ್ದವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಅನೇಕರು ತಮಗಾದ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯುವ ಬದಲು ಇದು ಬಾನಾಮತಿ ಇರಬಹುದು ಎಂದು ಭಾವಿಸಿ ಮಾಟಗಾರರ ಮೊರೆ ಹೋಗುತ್ತಾರೆ. ಆದರೆ ಈ ಕುಟುಂಬಕ್ಕೆ ಕರ್ನಾಟಕ ಮೌಢ್ಯ ಪ್ರತಿಬಂಧಕ ಕಾಯ್ದೆಯ ಪ್ರಕಾರ ಇಂತಹ ಅನಿಷ್ಟ ಪದ್ಧತಿಗಳನ್ನು ಮತ್ತು ಬಾನಾಮತಿಯ ಹೆಸರಿನಲ್ಲಿ ನಡೆಯುವ ಅಮಾನವೀಯ ಕೃತ್ಯಗಳನ್ನು ತಿಳಿ ಹೇಳಬೇಕು ಹಾಗೂ ಇಂತಹ ಅನಿಷ್ಟ ಪದ್ದತಿಗಳನ್ನು ನಿಷೇಧಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಹಚಡದ, ಅಥಣಿ ತಾಲೂಕಾ ಘಟಕದ ಮಹಿಳಾ ಅಧ್ಯಕ್ಷೆ ಕು. ಸಾನಿಯಾ ಮಕಾನದಾರ, ಉಪಾಧ್ಯಕ್ಷ ಅಣ್ಣಪ್ಪ ಸವದಿ, ಕಾಗವಾಡ ತಾಲೂಕಾಧ್ಯಕ್ಷ ದಾದಾಸೋ ಸಾವಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

