ಸರಳತೆಯ ಪ್ರಚಾರ | ಅಭಿವೃದ್ಧಿಯ ಮಂತ್ರ | ದುಂದುವೆಚ್ಚಕ್ಕೆ ಕಡಿವಾಣ
ಸಿಂದಗಿ: ಕರ್ಕಶವಾಗಿ ಒದುರುವ ಮೈಕುಗಳಿಲ್ಲ. ಜೈಕಾರ ಹಾಕುತ್ತ ಚೀರುವ ಯುವಕರಿಲ್ಲ. ಧೂಳೆಬ್ಬಿಸಿ ಆರ್ಭಟಿಸಿ ಬರುವ ಬೆಂಗಾವಲಿನ ವಾಹನಗಳಿಲ್ಲ. ಹೆಂಡ-ಹಣ ಹಂಚುವುದು ಮೊದಲೇ ಇಲ್ಲ. ದಾಬಾದಲ್ಲಿ ಊಟಾ ಮಾಡಿಸುವುದಿಲ್ಲ. ಯಾರಿಗೂ ತೇಜೋವಧೆ ಮಾಡುವುದಿಲ್ಲ. ಆರೋಪ-ಪ್ರತ್ಯಾರೋಪಕ್ಕೆ ಅವಕಾಶವಿಲ್ಲ. ಅಭಿವೃದ್ಧಿಯೇ ಮೂಲ ಮಂತ್ರವೆನ್ನುವ ಉರುಗೋಲು ಹಿಡಿದು ಸದ್ದಿಲ್ಲದೆ ನಡೆಯುತ್ತಿದೆ ಇಲ್ಲೊಂದು ಚುನಾವಣಾ ಪ್ರಚಾರ!.
ಹೌದು, ಈ ಮೇಲೆ ಹೇಳಿರುವುದು ಅಕ್ಷರಶಃ ಸತ್ಯ. ಸಿಂದಗಿ ವಿಧಾನಸಭೆ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಹೊರತುಪಡಿಸಿ ಎಲ್ಲ ಪಕ್ಷಗಳು ತುರುಸಿನ ಪ್ರಚಾರ ಕೈಗೊಂಡಿವೆ. ಆದರೆ, ಆಪ್ ಪಕ್ಷದ ಅಭ್ಯರ್ಥಿಯಾಗಿರುವ ಹಿರಿಯ ಜನಸೇವಕ ಮುರಿಗೆಪ್ಪಗೌಡ ರದ್ದೇವಾಡಗಿ ಅವರು ತಮ್ಮ ರಾಜಕೀಯದ ಅನುಭವ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಪ್ರಚಾರ ಕೈಗೊಂಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಯಾವ ರೀತಿ ನಡೆಸಬೇಕು ಎಂದು ಎದುರಾಳಿಗಳಿಗೆ ತೋರ್ಪಡಿಸುತ್ತಿದ್ದಾರೆ.
ಮತಕ್ಷೇತ್ರದ ಯಾವುದೇ ಹಳ್ಳಿಗೆ ಹೋದರೂ ಮುರಿಗೆಪ್ಪಗೌಡರ ಜೊತೆ ಅವರ ವಯೋಸಮಾನರಾದ ಗೆಳೆಯರ ಬಳಗ ಹಾಗೂ ಆಪ್ ಪಕ್ಷದ ಕಾರ್ಯಕರ್ತರ ತಂಡವು ಮತದಾರರ ಮನೆ ಮನೆಗೆ ತೆರಳಿ ಮನ ಮುಟ್ಟುವ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ತಮಗೆ ಮತ ನೀಡಿದರೆ ಅಭಿವೃದ್ಧಿಯ ಪರ್ವ ಸೃಷ್ಟಿಸುವುದಾಗಿ ವಿವರಿಸುತ್ತಿದ್ದಾರೆ. ಬದಲಾವಣೆ ಬಯಸಿ ನೋಡಿ ದೆಹಲಿ ಮಾದರಿಯಲ್ಲಿ ಕ್ಷೇತ್ರದಾದ್ಯಂತ ಇರುವ ಸರಕಾರಿ ಶಾಲೆಗಳ ಉನ್ನತ್ತೀಕರಿಸಿ ಬಡವರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುವುದೆಂದು ಮನದಟ್ಟು ಮಾಡುತ್ತಿದ್ದಾರೆ.
ಕ್ಷೇತ್ರದ ಹಳ್ಳಿಗಳ ಸಂಪರ್ಕ ರಸ್ತೆಗಳ ಸುಧಾರಣೆ. ಕೆರೆಗಳ ಅಭಿವೃದ್ಧಿ. ಎಲ್ಲ ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ರಸಗೊಬ್ಬರಗಳು, ಸಲಕರಣೆಗಳ ಪೂರೈಕೆ. ಅವಘಡಗಳಿಂದ ಸಾವನಪ್ಪುವ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು. ಜಾತಿ-ಧರ್ಮವೆನ್ನದೇ ಎಲ್ಲ ಸಮುದಾಯಗಳಿಗೆ ಸರಕಾರದ ಸೌಲತ್ತು ಒದಗಿಸುವುದು. ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವೀಕಲರಿಗೆ ಮಾಶಾಸನ ಕೊಡಿಸುವುದು ಸೇರಿದಂತೆ ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಹಾಗೂ ಪ್ರತಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಕಂಕಣಬದ್ಧರಾಗಿದ್ದೇನೆ ಎಂದು ಮುರಿಗೇಪ್ಪಗೌಡರು ತಣ್ಣಗೆ ಮತದಾರ ಪ್ರಭುಗಳ ಮನ ಮುಟ್ಟುತ್ತಿದ್ದಾರೆ.
ಒಟ್ಟಾರೆ ಈಗಿನ ರಾಜಕೀಯ ಸನ್ನಿವೇಶದಲ್ಲಿ ಚುನಾವಣೆಗಳು ಎಂಬುದು ಅಬ್ಬರದ ರೋಡ್ ಶೋ, ಬೃಹತ್ ಬಹಿರಂಗ ಸಮಾವೇಶಗಳು, ಅವುಗಳನ್ನು ಯಶಸ್ವಿ ಮಾಡುವುದಕ್ಕೆ ಜನರನ್ನು ದುಡ್ಡು ಕೊಟ್ಟು ಕರೆಯಿಸಿಕೊಳ್ಳುವುದು. ಮೇಲಾಗಿ ಸ್ಟಾರ್ ಪ್ರಚಾರಕರನ್ನು ಹಾಗೂ ಆಯಾ ಪಕ್ಷದಲ್ಲಿರುವ ಜಾತಿವಾರು ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು ಮಾಮೂಲಾಗಿಬಿಟ್ಟಿದೆ.
ಇದೆಲ್ಲದಕ್ಕೂ ತದ್ವಿರುದ್ಧವಾಗಿ ಹಾಗೂ ನಿಜವಾಗಿ ಪ್ರಜಾಪ್ರಭುತ್ವದ ಪೂಜಕರಾಗಿ ಯಾವುದೇ ಅಬ್ಬವಿರಲ್ಲದೇ ಸರಳವಾಗಿ ಮತದಾರರ ಮನ ಗೆಲ್ಲುವಲ್ಲಿ ನಿರತರಾಗಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮುರಿಗೆಪ್ಪಗೌಡರ ಕಾರ್ಯ ಶ್ಲಾಘನಾರ್ಹ.