ಆಲಮೇಲ: ಡಬಲ್ ಎಂಜಿನ್ ಸರಕಾರದ ಸಾಧನೆಗಳನ್ನು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ಶಾಸಕ ರಮೇಶ ಭೂಸನೂರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಬಿಜೆಪಿಯನ್ನು ಗೆಲ್ಲಿಸಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಹೇಳಿದರು.
ಭಾನುವಾರ ಮತಕ್ಷೇತ್ರದ ಬ್ಯಾಡಗಿಹಾಳ, ಕುರುಬತಳ್ಳಿ, ಮಡ್ನಳ್ಳಿ, ಅಲಹಳ್ಳಿ, ಹೊಸೂರ, ಗುಂದಗಿ ಗ್ರಾಮಗಳಲ್ಲಿ ಮತ್ತು ಆಲಮೇಲ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಶತಸಿದ್ಧ. ವಿವಿಧ ಪಕ್ಷಗಳಿಂದ ಮುಖಂಡರ ಮತ್ತು ಕಾರ್ಯಕರ್ತರ ದಂಡೇ ಬಿಜೆಪಿಯತ್ತ ಹರಿದು ಬರುತ್ತಿರುವುದೇ ಬಿಜೆಪಿಯ ಗೆಲುವಿನ ಮುನ್ಸೂಚನೆಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ವಚ್ಛ, ದಕ್ಷ ಆಡಳಿತಕ್ಕೆ ಜನತೆ ಫಿದಾ ಆಗಿದ್ದು ತಮಗೆ ಬಿಜೆಪಿಯೇ ಭರವಸೆ ಎಂದು ಖಾತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಪ್ರಣಾಳಿಕೆಗೆ ಮತದಾರರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು ಇದು ಮತಗಳಾಗಿ ಪರಿವರ್ತನೆಯಾಗಿ ಭೂಸನೂರ ಅವರು ಮತ್ತೊಮ್ಮೆ ವಿಜಯ ಪತಾಕೆ ಹಾರಿಸಿ ಸಚಿವರಾಗಿ ಬರಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಪಂ ಮಾಜಿ ಸದಸ್ಯ ಶ್ರೀಮಂತ ನಾಗೂರ, ಶರಣಪ್ಪ ಚಂಡಕಿ, ಬಸವರಾಜ ಪೂಜಾರಿ, ವಿಠ್ಠಲ ಯರಗಲ್, ಮುತ್ತುರಾಜ ಕಲಶೆಟ್ಟಿ, ಗಾಲೀಬಸಾಬ ನಾಗಾವಿ, ದತ್ತು ಸೊನ್ನ, ನಿಂಗಪ್ಪ ಅಳ್ಳಗಿ, ಬಲಭೀಮ ರಜಪೂತ, ಸಾಹೇಬಗೌಡ ಕಟ್ಟಿ, ಶಾಂತಮಲ್ಲ ನಾವಿ, ಭೀಮರಾಯ ಅತಾಪಿ, ಶಿವಾನಂದ ನಾಗಾವಿ, ಮಲ್ಲು ದೇಸುಣಗಿ ಸೇರಿದಂತೆ ಅಧಿಕ ಸಂಖ್ಯೆಯ ಕಾರ್ಯಕರ್ತರಿದ್ದರು.
ಕಾಂಗ್ರೆಸ್ ಅಭ್ಯರ್ಥಿಯ ಹೇಳಿಕೆ ಸತ್ಯಕ್ಕೆ ದೂರ..
ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ಒದಗಿಸುವಲ್ಲಿ ಶಾಸಕ ಭೂಸನೂರ ಅವರ ಪಾತ್ರವೇನೂ ಇಲ್ಲ ಎಂದು ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆ ನೀಡಿದ್ದು ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಹೇಳಿದರು.
ಭಾನುವಾರ ದೇವಣಗಾಂವ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಳವಾರ ಸಮಾಜದ ದಶಕಗಳ ಬೇಡಿಕೆ ನೆನೆಗುದಿಗೆ ಬಿದ್ದಿತ್ತು. ಯಾವ ಸರಕಾರವೂ ಅದರತ್ತ ಗಮನಹರಿಸಿರಲಿಲ್ಲ. ರಾಜ್ಯ ಬಿಜೆಪಿ ಸರಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಸಿಂದಗಿ ಉಪಚುನಾವಣೆ ಸಂದರ್ಭ ತಳವಾರ ಸಮಾಜಕ್ಕೆ ಬೇಡಿಕೆ ಪರಿಹರಿಸುವ ಕುರಿತು ಸಿಎಂ ಬೊಮ್ಮಾಯಿಯವರು ವಾಗ್ದಾನ ಮಾಡಿದ್ದರು. ಅದರಂತೆ ಚುನಾವಣೆ ಬಳಿಕ ಶಾಸಕ ರಮೇಶ ಬೂಸನೂರ ಈ ವಿಷಯಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರು, ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ ಬೇಡಿಕೆ ಈಡೇರಿಸಲು ಪ್ರಯತ್ನಿಸಿದ್ದಾರೆ.
ಅದಕ್ಕಾಗಿ ತಳವಾರ ಸಮಾಜ ಹೃದಯವಂತಿಕೆಯಿಂದ ಯೋಚಿಸಿ ನೋಡಿದರೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಕಾಂಗ್ರೆಸ್ಸಿನವರ ಸುಳ್ಳು ಮಾತುಗಳಿಗೆ, ಪೊಳ್ಳು ಭರವಸೆಗಳಿಗೆ ಬಲಿಯಾಗದೆ ಬಿಜೆಪಿಯನ್ನು ಒಮ್ಮನಸ್ಸಿನಿಂದ ಬೆಂಬಲಿಸಬೇಕೆಂದು ಕರೆ ನೀಡಿದರು.