ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಕಳ್ಳರ ಸುಳ್ಳು ವದಂತಿ ಜನತೆ ಕಿವಿಗೊಡದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ, ರಾತ್ರಿ ವೇಳೆ ತಮ್ಮ ಸುತ್ತಮುತ್ತ ಸಂಶಯಾಸ್ಪದ ವ್ಯಕ್ತಿಗಳು ಓಡಾಟ ನಡೆಸುತ್ತಿರುವುದ ಕಂಡುಬಂದರೆ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಬೇಕು. ಜನರ ರಕ್ಷಣೆಗೆ ಸದಾ ಪೊಲೀಸ್ ಇಲಾಖೆಯ ಸದಾ ಇದೆ. ಪೊಲೀಸ್ ಇಲಾಖೆಯೊಂದಿಗೆ ಜನರು ಸಹಕಾರ ನೀಡಬೇಕೆಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಸಂಜೆ ಕರೆದ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಡಾವಣೆಗಳಲ್ಲಿ ರಾತ್ರಿ ವೇಳೆ ಯಾರೂ ಅನಗತ್ಯವಾಗಿ ಬೈಕ್‌ನಲ್ಲಿ ಸಂಚರಿಸಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಕಳ್ಳರು ಬರುತ್ತಾರೆ ಎಂದು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೆಲವರು ರಾತ್ರಿ ವೇಳೆಯಲ್ಲಿ ಕಾವಲು ಕಾಯುತ್ತಿರುವದರಿಂದಾಗಿ ಬಡವಾಣೆ ನಿವಾಸಿಗಳಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಈ ನಿಟ್ಟಿನಲ್ಲಿ ಹಿರಿಯರು ಗಮನ ಹರಿಸಿ ಈ ರೀತಿಯಾಗದಂತೆ ನೋಡಿಕೊಳ್ಳುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಔಷಧ ಅಂಗಡಿ ಹೊರತು ಪಡಿಸಿ ರಾತ್ರಿ ೧೦ ಯೊಳಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತಾಗಬೇಕು. ಕೆಲವಡೆ 11 ಗಂಟೆಯ ನಂತರವೂ 3-4 ಪಾನಶಾಪ್ ಅಂಗಡಿ ತೆಗೆದಿರುವದು ಕಂಡುಬಂದಿದೆ. ಈ ರೀತಿಯಾಗಬಾರದು. ಅನುಮತಿ ಪಡೆಯದೇ ಇರುವ ಪಾನ್‌ಶಾಪ್‌ಗಳ ಬಗ್ಗೆ ಮಾಹಿತಿ ನೀಡುವಂತೆ ಪುರಸಭೆಗೆ ಪತ್ರ ಬರೆಯಲಾಗಿದೆ. ಯಾರೂ ಯಾವುದೇ ವದಂತಿಗಳಿಗೆ ನಂಬಬಾರದು. ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ರಾತ್ರಿ ವೇಳೆಯಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಗಳು ಎಲ್ಲ ಬಡವಾಣೆಗಳಲ್ಲಿ ಸಂಚರಿಸುತ್ತಾರೆ. ಯಾವುದೇ ರೀತಿಯ ಕಳ್ಳರ ಬಗ್ಗೆ ಗುಮಾನಿ ಕಂಡುಬಂದರೆ ತಕ್ಷಣವೇ ಪೊಲೀಸ್‌ರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಇದುವರೆಗೂ ಆಗಿರುವ ಕಳ್ಳತನ ಕುರಿತು ತನಿಖೆ ಮುಂದುವರಿದಿದೆ. ಖಂಡಿತ ಕಳ್ಳತನ ಮಾಡಿದವರನ್ನು ಪತ್ತೆ ಮಾಡಲಾಗುವದು ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ಗುರುಶಾಂತ ದಾಶ್ಯಾಳ ಮಾತನಾಡಿ, ಕಳ್ಳರ ಬಗ್ಗೆ ಗಾಳಿ ಸುದ್ದಿ ಹರಡಿ ಭಯದ ವಾತಾವರಣ ಮೂಡಿಸಬಾರದು. ಅಪರಿಚಿತರು ಮನೆ ಸುತ್ತಮುತ್ತ ಸುಳಿಯುತ್ತಿದ್ದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಮನೆ ಸೇರಿದಂತೆ ಸುತ್ತಮುತ್ತ ವಿಶಾಲ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಅಕ್ಕ-ಪಕ್ಕದವರ ಮನೆಯವರಿಗೆ ನಿಮ್ಮ ಮೊಬೈಲ್ ಸಂಖ್ಯೆ ಕೊಡಬೇಕು. ಅವರ ಮೊಬೈಲ್ ಸಂಖ್ಯೆಯ ಸಹ ನಿಮ್ಮ ಹತ್ತಿರ ಇರಬೇಕು. ಏನಾದರೂ ಕಳ್ಳತನ ಅವಘಡ ಸಂಭವಿಸಿದರೇ ತಕ್ಷಣವೇ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದರು.
ಹಗಲು-ರಾತ್ರಿ ಅನ್ನದೇ ಜನರ ರಕ್ಷಣೆಗಾಗಿ ಪೊಲೀಸ್‌ರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕುಡಿದು ವಾಹನ ಚಲಾಯಿಸುವದರಿಂದಾಗಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಕುಡಿದು ವಾಹನ ಚಲಾಯಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು. ವೇಗವಾಗಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಬಾರದು. ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದರು.
ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸುಸಜ್ಜತಿ ಸಿಸಿ ಕ್ಯಾಮರಾ ಅಳವಡಿಸಿದರೆ ಖಂಡಿತ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ರಾತ್ರಿ ೧೧ ಗಂಟೆಯ ನಂತರ ಕುಡಿದ ಮತ್ತಿನಲ್ಲಿ ಅಲೆದಾಡುವವರ ಮೇಲೆ ನಿಗಾ ವಹಿಸಬೇಕೆಂದು ಸಭೆಯ ಗಮನಕ್ಕೆ ಗಮನಕ್ಕೆ ತಂದರು.
ಬಸವೇಶ್ವರ ಸೇವಾ ಸಮಿತಿಯ ಸದಸ್ಯ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ರಾತ್ರಿ ೧ ಗಂಟೆಯಿಂದ ಬೆಳಗಿನ ಜಾವ ೪ ಗಂಟೆಯೊಳಗೆ ಪೊಲೀಸ್‌ರು ಹೆಚ್ಚು ಗಸ್ತು ತಿರುಗುವಂತಾಗಬೇಕು. ಕಳ್ಳತನ ಹಾವಳಿ ತಡೆಗಟ್ಟುವಲ್ಲಿ ಇದು ಸಹಕಾರಿಯಾಗುತ್ತದೆ. ಕಳ್ಳತನ ಪ್ರಕರಣಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದರು.
ಸಭೆಯಲ್ಲಿ ಸುರೇಶಗೌಡ ಪಾಟೀಲ, ಬಸಣ್ಣ ದೇಸಾಯಿ, ನೀಲಪ್ಪ ನಾಯಕ, ಸಂಗಮೇಶ ಕಾಳಹಸ್ತೇಶ್ವರಮಠ, ಸಂತೋಷ ಚಿಂಚೋಳಿ, ಸುರೇಶ ನಾಯಕ, ಲಕ್ಷ್ಮಣ ಪವಾರ, ಡಾ.ಬಸವರಾಜ ಚವ್ಹಾಣ, ತಮ್ಮಣ್ಣ ಬಡಿಗೇರ, ಶಿವಾನಂದ ಬೆಲ್ಲದ, ಸತೀಶ ಕ್ವಾಟಿ, ನಾಗರಾಜ ಸಜ್ಜನ, ಎಸ್.ಬಿ.ಮುತ್ತಗಿ, ಬಸವರಾಜ ಚನಗೊಂಡ, ಮಹಾಂತೇಶ ಚಕ್ರವರ್ತಿ, ರುಕ್ಮಿಣಿ ರಾಠೋಡ, ಗಂಗುಬಾಯಿ ಕುಂಬಾರ, ಈರಮ್ಮ ಕಲ್ಯಾಣಿ, ನೀಲಮ್ಮ ಜಲಪುರ ಸೇರಿದಂತೆ ಹೆಚ್ಚು ಜನರು ಭಾಗವಹಿಸಿದ್ದರು.

