ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಫೆ. ೪ ರಂದು ಐತಿಹಾಸಿಕವಾಗಿ ಜರುಗಲಿರುವ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ಉದ್ಘಾಟನೆ ಕಾರ್ಯಕ್ರಮದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೋಮವಾರ ಬಸವೇಶ್ವರ ದೇವಸ್ಥಾನ ಮುಂಭಾಗ ಮಖನಾಪೂರದ ಸೋಮಲಿಂಗ ಮಹಾರಾಜರು,ಜಕ್ಕನೂರಿನ ಡಾ. ಮಾದುಲಿಂಗ ಮಹಾರಾಜರು, ಅರಳಿಚಂಡಿಯ ಪರಮಾನಂದ ಮಹಾರಾಜರು ಸೇರಿದಂತೆ ವಿವಿಧ ಶ್ರೀಗಳು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಭವ್ಯರಥ ಯಾತ್ರೆಗೆ ಚಾಲನೆ ನೀಡಿದರು.
ಭವ್ಯ ರಥ ಯಾತ್ರೆಗೆ ಚಾಲನೆ ನೀಡುವ ಮೊದಲು ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ದೇವರಿಗೆ ಕ್ರಾಂತಿವೀರ ಬ್ರಿಗೇಡ್ ಸಂಸ್ಥಾಪಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿವಿಧ ಶ್ರೀಗಳೊಂದಿಗೆ ಪೂಜೆ, ಮಂಗಳಾರತಿ ನೆರವೇರಿಸಿದರು. ಭವ್ಯ ರಥಯಾತ್ರೆ ಚಾಲನೆಗೊಂಡ ನಂತರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು ಧರ್ಮ ಹಾಗೂ ದೇಶದ ರಕ್ಷಣೆ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಜನರಿಗೂ ನ್ಯಾಯ ಒದಗಿಸುವದು ಕ್ರಾಂತಿವೀರ ಬ್ರಿಗೇಡ್ ಸಂಘಟನೆಯ ಉದ್ದೇಶವಾಗಿದೆ. ಈ ಸಂಘಟನೆಯು ಜಾತ್ಯಾತೀತ, ಪಕ್ಷಾತೀತವಾಗಿದೆ. ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಫೆ.೪ ರಂದು ಕ್ರಾಂತಿವೀರ ಬ್ರಿಗೇಡ್ ಸಂಘಟನೆಯು ೧೦೦೮ ಸಾಧು-ಸಂತರ ಪಾದಪೂಜೆಯ ಮಾಡುವ ಮೂಲಕ ಉದ್ಘಾಟನೆಯಾಗಲಿದೆ. ಉದ್ಘಾಟನೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ೧೦೦೮ ಕುಂಭ ಹೊತ್ತ ಮಹಿಳೆಯರು ಭಾಗವಹಿಸಲಿದ್ದಾರೆ. ೧೦೦೮ ಕ್ಕೂ ಹೆಚ್ಚಿನ ಡೊಳ್ಳಿನ ಮಾರ್ದನಿ ಪಟ್ಟಣದಲ್ಲಿ ರಿಂಗಣಿಸಲಿದೆ. ಇದರ ಜೊತೆಗೆ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಇದೊಂದು ರಾಜ್ಯದಲ್ಲಿಯೇ ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಪಟ್ಟದೇವರು ಸೇರಿದಂತೆ ವಿವಿಧ ಶ್ರೀಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಜಾತ್ಯಾತೀತ, ಪಕ್ಷಾತೀತವಾಗಿ ಜರುಗಲಿದೆ. ಹಿಂದು ಧರ್ಮ, ದೇಶದ ರಕ್ಷಣೆ, ಎಲ್ಲ ಜನರಿಗೂ ನ್ಯಾಯ ಕೊಡಿಸುವ ಹಿತ ಬಯಸುವವರು ಯಾರೇ ಆಗಲಿ ಈ ಸಂಘಟನೆಯಲ್ಲಿ ತೊಡಗಿಕೊಳ್ಳಲು ಮುಕ್ತವಾಗಿ ಸ್ವಾಗತವಿದೆ. ಇದುವರೆಗೂ ನಾವು ಯಾವದೇ ಪಕ್ಷದ ಮುಖಂಡರಿಗೆ ಆಹ್ವಾನ ನೀಡಿಲ್ಲ. ಯಾವುದೇ ಪಕ್ಷದವರು ದೇಶ, ಹಿಂದು ಧರ್ಮದ ರಕ್ಷಣೆ ಬಯಸುವವರು ಇದರಲ್ಲಿ ಭಾಗವಹಿಸಬಹುದಾಗಿದೆ. ಈ ಐತಿಹಾಸಿಕ ಉದ್ಘಾಟನೆ ಕಾರ್ಯಕ್ರಮದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಇಂದಿನಿಂದ ಅಖಂಡ ಬಸವನಬಾಗೇವಾಡಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಭವ್ಯ ರಥ ಯಾತ್ರೆ ಜ. ೨೬ ರವರೆಗೆ ಸಂಚರಿಸಲಿದೆ. ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಭವ್ಯ ರಥಯಾತ್ರೆ ಚಾಲನೆ ಸಂದರ್ಭದಲ್ಲಿ ಹಳಿಂಗಳಿಯ ಅಲ್ಲಮಪ್ರಭು ಪೀಠದ ಮಹಾವೀರ ಪ್ರಭು, ಭತಗುಣಕಿಯ ರೇವಣಸಿದ್ದ ಮಹಾರಾಜರು, ಗದಗಿನ ಶಿವಕುಮಾರ ಸ್ವಾಮೀಜಿ, ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ರಾಜ್ಯ ಕಾರ್ಯದರ್ಶಿ ಅಶೋಕ ಒಡೆಯರ, ರಾಜಶೇಖರ ಯರನಾಳ, ಮುದಕಣ್ಣ ಹೊರ್ತಿ,ಸಿದ್ದಣ್ಣ ಹೆರಕಲ್ಲ, ಬಸವರಾಜ ಬಿಜಾಪುರ, ಶಂಕರ ಪತ್ತಾರ, ರಾಜಕುಮಾರ ಉಪ್ಪಲದಿನ್ನಿ, ರಾಜು ಬಿರಾದಾರ, ಶಂಕರ ಕುಂಬಾರ, ಮಲ್ಲಿಕಾರ್ಜುನ ಒಡೆಯರ, ಅರ್ಜುನ ಅಂಬಳನೂರ, ಶರಣಗೌಡ ಕೊಂಡಗುಳಿ, ಸುನೀಲ ಜಮಖಂಡಿ, ಕಾಶೀನಾಥ ಚನ್ನವೀರ, ಮಹಾಂತೇಶ ಕೆರೂಟಗಿ, ಮಲ್ಲು ಅಥಣಿ, ಶಿಲ್ಪಾ ಕುದರಗೊಂಡ, ಡಾ.ಗೀತಾ ಮಾಡಗಿ, ಸಂಗಮ ದೇವರಹಳ್ಳಿ, ಸೇರಿದಂತೆ ಇತರರು ಭಾಗವಹಿಸಿದ್ದರು. ಭವ್ಯ ರಥಯಾತ್ರೆಯು ಇಂದು ಇವಣಗಿ, ಹಂಚಿನಾಳ, ನರಸಲಗಿ, ಕಣಕಾಲ, ಹೆಬ್ಬಾಳ ಗ್ರಾಮಗಳಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸಿತು.

