ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಆದರ್ಶ ಮುಖ್ಯೋಪಾಧ್ಯಾಯ ರವಿಕುಮಾರ ನಾಯಕ.ಬಿ ಇವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ಇವರು ಹಮ್ಮಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಮುಖ್ಯೋಪಾಧ್ಯಾಯರು ಪ್ರಶಸ್ತಿ ನೀಡಿ ಗೌರವಿಸಿರುವರು.
ಜಾಣ ವಿದ್ಯಾರ್ಥಿಗಳ ತಾಣ ಎಂದೇ ಹೆಸರಾದ ನಿವರಗಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ೨೩ ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವರು. ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಸರಳವಾಗಿ ಬೋಧನೆ ಮಾಡುವ ಪರಿಣಿತರು. ವಿದ್ಯಾರ್ಥಿಗಳಿಗೆ ತಮ್ಮದೇ ಶೈಲಿಯಲ್ಲಿ ವಿದ್ಯಾರ್ಜನೆ ಮಾಡಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿರುವರು. ನಮ್ಮ ವಿದ್ಯಾರ್ಥಿಗಳು ಎ.ಪಿ.ಜೆಅಬ್ದುಲ ಕಲಾಂರಂತೆ ವಿಜ್ಞಾನಿಗಳಾಗಬೇಕೆಂಬ ಹಿರಿಯಾಸೆ ನಮ್ಮದು. ಸರಳ ಸೌಮ್ಯ ಸ್ವಭಾವದ ಇವರು ಎಲ್ಲರಿಗೂ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ. ಸರಳ ಬೋಧನೆ ಮಾಡಿ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸುವ ಚತುರರು. ಬೋಧನೆಯಲ್ಲಿ ಅಲಕ್ಷ ಮಾಡಬಾರದು. ವಿದ್ಯಾರ್ಥಿಗಳನ್ನು ಜಾಣ ಮಾಡುವ ಸಂಕಲ್ಪ ನಮ್ಮದಾಗಬೇಕೆಂದು ಹೇಳುವರು. ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶುಭ ಹಾರೈಸಿರುವರು.

