ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಶಿಕ್ಷಣವು ಎಲ್ಲರಿಗೆ ಅಭಿವೃದ್ಧಿ, ಶಾಂತಿ, ನ್ಯಾಯ, ಸ್ವಾತಂತ್ರ ಮತ್ತು ಸಮಾನತೆಯ ಜಗತ್ತನ್ನು ಸಾಧಿಸುವ ಸಾಧನವಾಗಿದೆ. ಹೀಗಾಗಿ ಶಿಕ್ಷಣ ಎಲ್ಲರಿಗೂ ಅತ್ಯಗತ್ಯ. ಶಿಕ್ಷಣವಿಲ್ಲದೆ ಉತ್ತಮ ಜೀವನ ಸಾಧ್ಯವಿಲ್ಲ ಎಂದು ಲಾಡಲಿ ಫೌಂಡೇಶನ ಟ್ರಸ್ಟದ ರಾಯಭಾರಿ ಶಿಫಾ ಜಮಾದಾರ ಹೇಳಿದರು.
ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಡಲಿ ಫೌಂಡೇಶನ ಟ್ರಸ್ಟದ ವತಿಯಿಂದ ಇತ್ತಿಚಿಗೆ ಆಯೋಜಿಸಲಾಗಿದ್ದ ಶಿಕ್ಷಣದ ಮಹತ್ವ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವು ವಿವಿಧ ಉದ್ಯೋಗಗಳಿಗೆ ಜನರನ್ನು ಸಿದ್ದಪಡಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಸುಶಿಕ್ಷಿತ ಸಮಾಜದ ಅಭಿವೃದ್ದಿಯಿಂದ ದೇಶದ ಬೆಳವಣಿಗೆಯಾಗಲಿದೆ. ಜ್ಞಾನ ಎಂಬ ಬೆಳಕಿನಿಂದ ಅಂಧಕಾರ ಎಂಬ ಕತ್ತಲೆ ದೂರವಾಗುತ್ತದೆ. ಹೀಗಾಗಿ ಶಿಕ್ಷಣ ಬದುಕಿನ ಭಾಗವಾಗಬೇಕು. ವಿದ್ಯಾರ್ಥಿ ಹಂತದಲ್ಲಿ ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ವ್ಯರ್ಥವಾಗಿ ಸಮಯ ವ್ಯವಸುವ ಬದಲು ಉತ್ತಮ ಪುಸ್ತಕವನ್ನು ಓದಿ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಜ್ಞಾನ ಯಾರು ಕಸಿದುಕೊಳ್ಳಲಾಗದ ಸಂಪತ್ತು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮುಖ್ಯೋಧ್ಯಾಪಕಿ ವಿದ್ಯಾ ಸವನಳ್ಳಿ ಮಾತನಾಡಿ ವಿದ್ಯೆಯ ಜೊತೆಗೆ ವಿನಯವು ಇರಬೇಕು. ನಮ್ಮ ಬದುಕು ಉಜ್ವಲವಾಗಲು ನಮ್ಮ ಭವಿಷ್ಯ ಉತ್ತಮವಾಗಲು ಶಿಕ್ಷಣವೆ ದಿವ್ಯಾಧಾರ. ಶಿಕ್ಷಣ ಬದುಕಿನಲ್ಲಿ ಅಮೂಲ್ಯ ಶಕ್ತಿ. ಸಮಾಜದಲ್ಲಿ ಬದುಕಲು ಸರಿಯಾದ ಮತ್ತು ಉನ್ನತ ಶಿಕ್ಷಣವು ನಮ್ಮನ್ನು ಹೆಚ್ಚು ಸುಸಂಸ್ಕೃತರಾಗಿ ಮಾಡುತ್ತದೆ ಎಂದರು.
ಲಾಡಲಿ ಫೌಂಡೇಶನ ಟ್ರಸ್ಟದ ರಾಷ್ಟೀಯ ಸಲಹೆಗಾರ ಡಾ. ಜಾವೀದ ಜಮಾದಾರ ಸಾರಿಗೆ ಇಲಾಖೆಯ ಸಹಾಯಕ ಅಭಿಯಂತಕ ಮಲ್ಲಿಕಾರ್ಜುನ ಬಿರಾದಾರ, ವಿಜಯಪುರ ಸಾರಿಗೆ ಘಟಕದ ವ್ಯವಸ್ಥಾಪಕ ಆನಂದ ಹೂಗಾರ ಮಾತನಾಡಿದರು.
ಲಾಡಲಿ ಫೌಂಡೇಶನ್ ಟ್ರಸ್ಟದ ಜಿಲ್ಲಾ ವ್ಯವಸ್ಥಾಪಕ ಯುಸೂಫ ಕೊಟ್ಟಲ, ಪ್ರೀತಿ ಪತ್ತಾರ, ಸರಿತಾ ಚಕ್ರಸಾಲಿ ಉಪಸ್ಥಿತರಿದ್ದರು.
ಆರ್.ಕೆ. ಬಿಸನಾಳ ಸ್ವಾಗತಿಸಿದರು. ಸುನೀತಾ ಭಜಂತ್ರಿ ವಂದಿಸಿದರು. ಎ.ಎಸ್. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

