ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಕಾಮಗಾರಿಯ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಸೋಮವಾರ ಧರಣಿ ಸತ್ಯಾಗ್ರಹ ಆರಂಭಿಸಿದರು.
ಈ ವೇಳೆ ಡಿಎಸ್‌ಎಸ್ ಮುಖಂಡ ಹರೀಶ ನಾಟೆಕಾರ ಮಾತನಾಡಿ, ಎಸ್‌ಎಫ್‌ಸಿ ಅನುದಾನದ ಅಡಿ ಅಂಬೇಡ್ಕರ್ ಅವರ ಹೊಸ ಮೂರ್ತಿ ಸಹಿತ ವೃತ್ತವನ್ನು ಅಭಿವೃದ್ಧಿ ಕಾಮಗಾರಿ ನಡೆಸಿ ಸುಮಾರು ಎರಡು ವರ್ಷಗಳ ಹಿಂದೆ ಈ ವೃತ್ತವನ್ನು ಉದ್ಘಾಟಿಸಲಾಗಿದೆ. ಆದರೆ ಈ ವರೆಗೆ ಕಾಮಗಾರಿಯ ಬಿಲ್ ಪಾವತಿ ಮಾಡಿರುವದಿಲ್ಲ. ಈಗಾಗಲೇ ಶೇ೯೦ ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಬಿಲ್ ಪಾವತಿಯಾದಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸುವ ಮಹದಾಸೆಯನ್ನಿಟ್ಟುಕೊಂಡಿದ್ದೇವೆ. ಬಿಲ್ ಪಾವತಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕ ಸಿ.ಎಸ್.ನಾಡಗೌಡರಿಗೆ, ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತರಿಗೆ ದೂರಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದೇವೆ. ಈಗಲೂ ಬಿಲ್ ಪಾವತಿ ಮಾಡದಿದ್ದರೆ ಹೋರಾಟವನ್ನು ೫ ಹಂತಗಳಾಗಿ ಉಗ್ರವಾಗಿಸುತ್ತೇವೆ. ಆಗಲೂ ಬಿಲ್ ಪಾವತಿಸದಿದ್ದಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುತ್ತೇವೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಸಿಪಿಐ ಸಂಜೀವ ತಿಪರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮಾಹಿತಿ ಪಡೆದರು. ಈ ವೇಳೆ ಬಸವರಾಜ ಸಿದ್ದಾಪೂರ ಮಾತನಾಡಿ ಈ ಬಿಲ್ ಮಾಡುವ ಅಧಿಕಾರ ಪುರಸಭೆ ವ್ಯಾಪ್ತಿಯದ್ದಾಗಿದ್ದು ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡೆ ನಮ್ಮ ಹೋರಾಟಕ್ಕೆ ಕಾರಣವಾಗಿದೆ. ದಯವಿಟ್ಟು ಯಾರೂ ಅಂಬೇಡ್ಕರ್ ವಿಷಯದಲ್ಲಿ ರಾಜಕೀಯ ಮಾಡಕೂಡದು. ಇದರಲ್ಲಿ ರಾಜಕೀಯ ಮಾಡಿದರೆ ನಾವು ಬಿಡುವದಿಲ್ಲ ಎಂದರು.
ಹೋರಾಟದಲ್ಲಿ ಪರಶುರಾಮ ನಾಲತವಾಡ, ಪರಶುರಾಮ ಮುರಾಳ, ಪ್ರಕಾಶ ಸರೂರ ಸೇರಿದಂತೆ ಹಲವರು ಭಾಗಿಯಾದ್ದರು.

