ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹಾಲುಮತಸ್ಥರು ಜಾಗೃತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ ಹೇಳಿದರು.
ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಬಳಿಯಿರುವ ರವಿಕಾಂತ ನಾಯ್ಕೋಡಿ ಅವರ ಮನೆಯ ಆವರಣದಲ್ಲಿ ಹಮ್ಮಿಕೊಂಡ ಕ್ರಾಂತಿವೀರ ಬ್ರಿಗೇಡ್ ಕಾರ್ಯಕ್ರಮ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಸಣ್ಣಪುಟ್ಟ ಸಮುದಾಯಗಳು ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತುಳಿತಕ್ಕೆ ಒಳಗಾಗುತ್ತಿವೆ. ಅಂತಹ ಸಮುದಾಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ನಮ್ಮ ಕ್ರಾಂತಿವೀರ ಬ್ರಿಗೇಡ್ ದ್ವನಿ ಎತ್ತುವ ಕೆಲಸ ಪ್ರಾಮಾಣಿಕವಾಗಿ ನಿರ್ವಹಿಸಲಿದೆ. ಬರುವ ಫೆ.೪ರಂದು ೧೦೦೮ ಶ್ರೀಗಳ ಪಾದ ಪೂಜೆ ಮೂಲಕ ಕೊಲ್ಲಾಪುರ ಶ್ರೀಗಳಿಂದ ವಿಜಯಪುರ ಜಿಲ್ಲೆಯ ಬಸವನಾಡು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಸಮಾವೇಶ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಕಾರಣ ಸಿಂದಗಿ ಹಾಗೂ ಆಲಮೇಲ ತಾಲೂಕಿನಿಂದ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಸಂಘಟನೆಗೆ ಬಲ ತುಂಬಬೇಕು. ಎಂದು ಮನವಿ ಮಾಡಿದರು.
ಗೋ ಎಂದರೆ ತಾಯಿ, ಅವಳನ್ನು ಕಣ್ಣೆದುರೇ ಕೊಲೆ ಮಾಡುವ ಕಾರ್ಯ ನಡೆಯುತ್ತಿದೆ. ಸದ್ಯಕ್ಕೆ ಮಹಾತ್ಮ ಗಾಂಧೀಜಿ ಏನಾದ್ರು ಬದುಕಿದ್ರೆ ಇದನ್ನು ನೋಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಗೋ ಮಾತೇ ಹಾಗೂ ಮಠ ಮಾನ್ಯಗಳ ಅಭಿವೃದ್ಧಿ ಮತ್ತು ಹಿಂದುತ್ವ ಉಳಿವು ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ.
ಈ ವೇಳೆ ಹಾಲುಮತ ಸಮುದಾಯದ ಯುವ ಮುಖಂಡ ರವಿಕಾಂತ ನಾಯ್ಕೋಡಿ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ತಮ್ಮ ರಾಜಕೀಯ ಜೀವನದಲ್ಲಿ ಕೇವಲ ಹಾಲುಮತ ಸಮುದಾಯಕಷ್ಟೆ ಅಲ್ಲದೇ ಅನೇಕ ಸಣ್ಣಪುಟ್ಟ ಸಮುದಾಯದ ಏಳಿಗೆಗಾಗಿ ಶ್ರಮಿಸಿದ್ದಾರೆ. ಸಣ್ಣ ಪುಟ್ಟ ಸಮಾಜದ ಮಕ್ಕಳು ಶಿಕ್ಷಣವಂತರಾಗಬೇಕು. ಸರ್ಕಾರಿ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ಮುಟ್ಟಬೇಕು. ಬಡ ಮಕ್ಕಳು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎನ್ನುವುದು ಇವರ ಕನಸಾಗಿದೆ. ಅ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಸಮಾವೇಶಕ್ಕೆ ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮೋರಟಗಿಯ ಶ್ರೀ ರಾವುತರಾಯ ದೇವರು, ಹಾಲುಮತ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ನಾಗಪ್ಪ ಶಿವೂರ, ಸಿದ್ದು ಬುಳ್ಳಾ, ಶರಣಪ್ಪ ಹಿರೇಕುರುಬರ, ಮಲ್ಲಿಕಾರ್ಜುನ ಸಾವಳಸಂಗ, ನಿಂಗಣ್ಣ ಬುಳ್ಳಾ ಶಿಲ್ಪಾ ಕುದರಗೊಂಡ, ಸಿದ್ದು ಹದನೂರ, ಪ್ರಕಾಶ ಹಿರೇಕುರುಬರ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು ಹಾಗೂ ಬಾಂಧವರು ಇದ್ದರು.
“ಯಾವುದೇ ಪಕ್ಷದ ಅಥವಾ ಒಬ್ಬ ವ್ಯಕ್ತಿಯ ಬೆಳವಣಿಗೆಗಾಗಿ ಸಂಘಟನೆ ಮಾಡುತ್ತಿಲ್ಲ. ಹಿಂದುಳಿದ ವರ್ಗಗಳ ಏಳಿಗೆಗಾಗಿ ಹಾಗೂ ಹಿಂದುತ್ವದ ಉಳಿವಿಗಾಗಿ ಮಾಡುತ್ತಿದ್ದೇವೆ.”
– ಕೆ.ಎಸ್.ಈಶ್ವರಪ್ಪ
ಮಾಜಿ ಡಿಸಿಎಂ

