ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ದೇಶ ಸ್ವತಂತ್ರವಾದ ನಂತರ ಗೋ ಹತ್ಯೆ ನಿಷೇಧ ನಮ್ಮ ಮೊದಲನೇ ಕಾನೂನು ಆಗಿರುತ್ತೆ ಅಂತ ಹೇಳಿದ್ರು. ಸಧ್ಯ ಅವರೇನಾದ್ರು ಬದುಕಿದ್ರೆ ಗೋವಿನ ಬಗ್ಗೆ ಈ ಕಾಂಗ್ರೇಸ್ ನವರು ನಡೆಸಿಕೊಳ್ಳೋ ರೂಪ ನೋಡಿದ್ರೆ ನೇಣು ಹಾಕಿಕೊಂಡು ಸತ್ತೇ ಹೋಗತಿದ್ರು ಎಂದು ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಕುಟುಕಿದರು.
ತಾಲೂಕಿನ ಕುಂಟೋಜಿ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಗೋವನ್ನ ಪ್ರತಿದಿನ ಕೊಲ್ಲಲಾಗುತ್ತಿದೆ. ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ತೆರಳುವ ಭಕ್ತರಿಗೆ ಹಸುವಿನ ತಲೆ, ಚರ್ಮದ ದರ್ಶನವಾಗುತ್ತಿದೆ. ಇದರ ಹಿಂದೆ ಈ ದೇಶದ ಹಿಂದೂಗಳಿಗೆ ನೋವಾಗಲಿ ಎನ್ನುವ ಉದ್ದೇಶ ಇದೆ. ಸರ್ಕಾರ ಇದಕ್ಕೆ ಯಾರೊಬ್ಬ ಆರೋಪಿಯನ್ನು ಬಂಧಿಸಿಲ್ಲ. ಹಿಂದೆ ನಮ್ಮ ಸರ್ಕಾರದಲ್ಲಿ ಎಲ್ಲ ಜಿಲ್ಲೆಗಳಿಗೆ ಗೋ ಶಾಲೆ ತೆರೆಯಲು ಬಜೆಟ್ ನಲ್ಲಿ ದುಡ್ಡಿಡಲಾಗಿತ್ತು. ೧೪ ಜಿಲ್ಲೆಗಳಲ್ಲಿ ಗೋ ಶಾಲೆಗಳನ್ನು ತೆರಯಲಾಗಿತ್ತು. ಅಷ್ಟೊತ್ತಿಗೆ ನಮ್ಮ ಸರ್ಕಾರ ಬಿದ್ದೋಯ್ತು. ಬಳಿಕ ಬಂದ ಈ ಕಾಂಗ್ರೆಸ್ ಸರ್ಕಾರ ಉಳಿದ ಗೋಶಾಲೆಗಳನ್ನು ತೆರೆಯೋದು ಬಿಟ್ಟು ಇನ್ಮುಂದೆ ಗೋ ಶಾಲೆಗಳನ್ನೇ ತೆರೆಯೋದಿಲ್ಲ ಎಂದು ತೀರ್ಮಾನ ತೆಗೆದುಕೊಂಡಬಿಡ್ತು, ಎಷ್ಟೊಂದು ನಾಚಿಗೆಗೇಡುತನ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುಳಿದವರು, ದಲಿತರು, ಹಿಂದೂ ಸಮಾಜದಲ್ಲಿರುವ ಎಲ್ಲಾ ಬಡವರಿಗೆ ಸರಿಯಾದ ಶಿಕ್ಷಣ ಇಲ್ಲ, ಕುಡಿಯೋಕೆ ನೀರಿಲ್ಲ, ಗುಡಿಸಲಲ್ಲಿ ವಾಸಿಸುತ್ತಿದ್ದಾರೆ ಇದನ್ನೆಲ್ಲ ಅಭಿವೃದ್ಧಿ ಮಾಡೋದು ಮತ್ತು ಹಿಂದುಗಳಿಗೆ ತೊಂದರೆಯಾದರೆ ಅಲ್ಲಿ ಬ್ರಿಗೇಡ್ ಇರುತ್ತೆ. ಹಿಂದು ಧರ್ಮದ ಅಭಿವೃದ್ಧಿಗಾಗಿ ಸಾಧು ಸಂತರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಆದರೆ ಅವರಿಗೆ ಒಂದು ಕಡೆಯಿಂದ ಇನ್ನೊಂದೆಡೆ ಹೋಗಲು ಬಸ್ ಚಾರ್ಜ ಸಹ ಇಲ್ಲ. ಅವರಿಗೆ ನೆರವಾಗಲು, ಅಭಿವೃದ್ಧಿಯಾಗದ ಚಿಕ್ಕ ಚಿಕ್ಕ ಮಂದಿರಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಬ್ರಿಗೇಡ್ ಪ್ರಾರಂಭಿಸಿಲಾಗಿದೆ ಎಂದರು.
ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗಾಗಿ ಇರೋದು ಈ ಕ್ರಾಂತಿವೀರ ಬ್ರಿಗೇಡ್. ಇವತ್ತಿನ ಸರ್ಕಾರ ಹಿಂದು ಧರ್ಮದ ಬಗ್ಗೆ ನಿರ್ಲಕ್ಷ ತೋರುತ್ತಿದೆ. ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಪ್ರಮುಖರಾದ ಗುರುಲಿಂಗಪ್ಪ ಸುಳ್ಳಳ್ಳಿ, ಕೆಂಚಪ್ಪಣ್ಣ ಬಿರಾದಾರ, ಮುತ್ತಣ್ಣ ಹುಗ್ಗಿ, ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ ಸೇರಿದಂತೆ ಹಲವರು ಇದ್ದರು,
“ಚಾಮರಾಜಪೇಟೆಯಲ್ಲಿ ನಡೆದ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಗೃಹ ಮಂತ್ರಿ ಪರಮೇಶ್ವರ ಹೇಳಿದ್ದು ಆರೋಪಿಯೊಬ್ಬ ಕುಡುಕ, ತಲೆ ಕೆಟ್ಟೋನು ಅಂತಾ. ಹಸುಗಳ ಕೆಚ್ಚಲು ಕತ್ತರಿಸಿದೋನು ಕುಡುಕ ತಲೆ ಕೆಟ್ಟೋನು ಅಲ್ಲ, ಈ ರಾಜ್ಯದ ಗೃಹ ಮಂತ್ರಿ ಕುಡುಕ, ತಲೆ ಕೆಟ್ಟೋನು.”
– ಕೆ.ಎಸ್.ಈಶ್ವರಪ್ಪ
ಮಾಜಿ ಉಪ ಮುಖ್ಯಮಂತ್ರಿ

