ವಿಜಯಪುರ ನಗರಾದ್ಯಂತ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಮಕ್ಕಳಿಗೂ ವಿಮೆ | ಮಕ್ಕಳ ಬದುಕಿನಲ್ಲಿ ಹೊಸ ಭಾಷ್ಯ ಬರೆಯುವ ಸುಂದರ ಕ್ಷಣಕ್ಕೆ ಸಾಕ್ಷಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲೇ ಪ್ರಥಮ ಹಾಗೂ ವಿನೂತನವಾಗಿ ಶಾಲಾ ಮಕ್ಕಳಿಗೆ ಗುಂಪು ವಿಮೆಗೆ ಒಳಪಡಿಸುವ ಮಹತ್ತರ ಕಾರ್ಯಕ್ರಮಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವು ಶನಿವಾರ ಸಾಕ್ಷಿ ಆಯಿತು.
ಮಕ್ಕಳು ಅಪಘಾತ, ವಿದ್ಯುತ್ ಶಾಕ್, ಹಾವು, ಚೇಳು ಕಡಿತ ಮತ್ತಿತರೆ ಕಾರಣಗಳಿಂದ ಮೃತಪಟ್ಟರೆ, ಅವರನ್ನೇ ನಂಬಿದ್ದ ಆ ಮನೆಯೇ ಕತ್ತಲಾಗಲಿದೆ. ಈ ವಿಮೆ ಸೌಲಭ್ಯದಿಂದ ಅಂತಹ ಪಾಲಕರಿಗೆ ಆರ್ಥಿಕವಾಗಿ ನೆರವಾಗಲು (ರೂ.2 ಲಕ್ಷ ಪರಿಹಾರ), ಗಂಭೀರವಾಗಿ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ (ರೂ.1 ಲಕ್ಷ ಪರಿಹಾರ) ಅನುಕೂಲ ಕಲ್ಪಿಸುವ ಸದುದ್ದೇಶದಿಂದ ನಮ್ಮ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಮಾ ಖಾತೆಗೆ ಹಣ ಭರಣಾ ಮಾಡಿ, ವಿಜಯಪುರ ನಗರ ಮತಕ್ಷೇತ್ರದದಲ್ಲಿ ಬರುವ 128 ಪ್ರಾಥಮಿಕ ಶಾಲೆಗಳು ಹಾಗೂ 7 ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 15,279 ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸಿ, ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ, ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಸಂಸ್ಥೆ ನವದೆಹಲಿ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಸಹ ವಿತರಿಸಲಾಯಿತು.
ನಂತರ ಮಾತನಾಡಿದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಸುರಕ್ಷತೆ ಎನ್ನುವುದು ಎಲ್ಲದಕ್ಕೂ ಇದೆ, ಅವರಿಗೆ ವಿಮೆ ಮಾಡಬೇಕೆಂದು ಯೋಚಿಸಿ, ನಗರ ಮಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಿಗೆ ಮಾತ್ರ ವಿಮೆಗೆ ಒಳಪಡಿಸಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಮನವಿ ಮೇರೆಗೆ ನಗರದಲ್ಲಿ ಬರುವ (ನಾಗಠಾಣ ಮತಕ್ಷೇತ್ರವೂ ಒಳಗೊಂಡಂತೆ) ಎಲ್ಲ ಅನುದಾನಿತ, ಅನುದಾನ ರಹಿತ ಶಾಲೆಗಳ ಮಕ್ಕಳಿಗೂ ಸಹ ಈ ಗುಂಪು ಯೋಜನೆಯಡಿ ಒಳಪಡಿಸುವುದಾಗಿ ಘೋಷಿಸಿದರು.
ವಿಮೆ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಹಾಗೂ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಗೆ ಹಾಗೂ ಎಲ್ಲ ತಾಲ್ಲೂಕುಗಳಿಗೆ ಪ್ರಥಮ ಸ್ಥಾನ ಪಡೆಯುವ ಮಕ್ಕಳಿಗೆ ಲ್ಯಾಪಟಾಪ್ ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ನಗರದ ಸರ್ಕಾರಿ ಶಾಲೆಗಳ ಸಾಕಷ್ಟು ಕೊಠಡಿಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಮೂಲಸೌಕರ್ಯ ಒದಗಿಸಲಾಗಿದ್ದು, ದೇಶದ ಭವಿಷ್ಯ ರೂಪಿಸುವ ಶಾಲೆಗಳ ಅಭಿವೃದ್ಧಿಗೂ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ಈ ದಿನ ಅತ್ಯಂತ ಶುದಿನವಾಗಿದೆ. ಬಸನಗೌಡ ಪಾಟೀಲ ಯತ್ನಾಳರು, ಇಂದಿನ ಮಕ್ಕಳೇ ನಾಳೆಯ ನಾಗರಿಕರು ಎಂಬ ಕಲ್ಪನೆಯಿಂದ ತಮ್ಮ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ಜಾತಿ, ಧರ್ಮ ಎನ್ನದೆ, ನನ್ನ ನಾಗಠಾಣ ಮತಕ್ಷೇತ್ರದಲ್ಲೂ 33 ಶಾಲೆಗಳು ಸೇರಿ ನೂರಾರು ಶಾಲೆಗಳ ಮಕ್ಕಳಿಗೆ ಗುಂಪು ವಿಮೆ ಮಾಡಿಸುವ ಮೂಲಕ ದೇಶದಲ್ಲೇ ಮಾದರಿ ಕಾರ್ಯ. ಅವರು ಮತ್ತೊಬ್ಬರಿಗೆ ಮಾರ್ಗದರ್ಶಿಯಾಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಮಕ್ಕಳ ಜೀವನದಲ್ಲಿ ನೀರಿನಲ್ಲಿ ಮುಳುಗಿ, ಹಾವು, ಚೇಳು ಕಡಿತ, ವಿದ್ಯುತ್ ಶಾಕ್ ಮತ್ತಿತರೆ ಕಾರಣದಿಂದ ಆಗಬಹುದಾದ ಅಪಾಯಕ್ಕೆ ಗುಂಪು ವಿಮೆ ಜಾರಿ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮಾತನಾಡಿ, ಮಗು ಮನುಷ್ಯನ ತಂದೆ. ಇದು ಮಕ್ಕಳ ಪ್ರಪಂಚ. ಮಕ್ಕಳಿಗಾಗಿಯೇ ಶಿಕ್ಷಕರು, ಪಾಲಕರು. ಅವರ ಯೋಜನೆಗಳನ್ನು ರೂಪಿಸುವುದು ನಮ್ಮ ಕರ್ತವ್ಯ. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಮಕ್ಕಳಿಗಾಗಿ ಮಾಡುತ್ತಿರುವ ವಿಮೆ ಯೋಜನೆ ದೇಶದಲ್ಲೇ ಪ್ರಥಮ ಕಾರ್ಯಕ್ರಮ ಎನ್ನುವುದಕ್ಕೆ ಖುಷಿ ಆಗುತ್ತಿದೆ ಎಂದರು.
ವಿಜಯಪುರ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಅತ್ಯಂತ ಸಮಾಜಮುಖಿಯಾಗಿ ಗುಂಪು ವಿಮೆ ಅದ್ಯಾರ್ಪಿಸಿ, ಪತ್ರ ನೀಡುವ ಮೂಲಕ ಮಕ್ಕಳ ಬದುಕಿನಲ್ಲಿ ಹೊಸ ಭಾಷ್ಯ ಬರೆಯುವ ಸುಂದರ ಕ್ಷಣಕ್ಕೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಮಾಡಿರುವ ಕೆಲಸ ಐತಿಹಾಸಿಕ ಹಾಗೂ ಅರ್ಥಪೂರ್ಣವಾದದ್ದು ಎಂದು ಹೇಳಿದರು.
ಸಮಾಜ ಸೇವಕ ವಿಜಯಕುಮಾರ ಟಂಕಸಾಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ವಿಠ್ಠಲ ಹೊಸಪೇಟೆ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ಮಲ್ಲಿಕಾರ್ಜುನ ಗಡಗಿ, ಗಿರೀಶ ಪಾಟೀಲ, ಸ್ವಪ್ನಾ ಕಣಮುಚನಾಳ, ಮುಖಂಡರಾದ ರಾಜೇಶ ದೇವಗಿರಿ, ಮಹೇಶ ಒಡೆಯರ, ಸಚೀನ ಕುಮಸೆ ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕ ರವೀಂದ್ರ ರತ್ನಾಕರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಪಟ್ಟಣಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರ ಸೇರಿದಂತೆ ಶಿಕ್ಷಣ ತಜ್ಞರು, ಶಿಕ್ಷಕರು, ಪಾಲಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಉಪಸ್ಥಿತರಿದ್ದರು.

