ಸಿಂದಗಿಯಲ್ಲಿ ೨೦ಪುಸ್ತಕಗಳ ಲೋಕಾರ್ಪಣೆ | ರಾಜ್ಯಮಟ್ಟದ ಬೆರಗು ಪ್ರಶಸ್ತಿ ಪ್ರದಾನ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರಕಾರ ಎಲ್ಲ ಭಾಗ್ಯಗಳನ್ನು ಕರುಣಿಸಿದೆ, ಆದರೆ ಪುಸ್ತಕ ಸಂಸ್ಕೃತಿ ಭಾಗ್ಯ ಕೊಡುವದನ್ನು ಮರೆತಿದೆ ಎಂದು ಬೆಂಗಳೂರು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ವೆಂಕಟೇಶ ವಿಷಾಧ ವ್ಯಕ್ತಪಡಿಸಿದರು.
ಅವರು ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ಹಾಗೂ ಸಿಂದಗಿಯ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪಿಯು ಕಾಲೇಜಿನಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಸ್ಮರಣೆಗಾಗಿ ಹಮ್ಮಿಕೊಂಡಿದ್ದ ೨೦ ಪುಸ್ತಕಗಳ ಬಿಡುಗಡೆ ಮತ್ತು ಬೆರಗು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರಕಾಶಕರಿಗೆ ಕಳೆದ ನಾಲ್ಕು ವರ್ಷಗಳಿಂದ ಸರಕಾರ ಪುಸ್ತಕ ಖರೀದಿಯ ಭಾಗ್ಯ ನೀಡಿಲ್ಲ, ೨೦೨೧ರ ಪುಸ್ತಕ ಖರೀದಿಸಿ ಹಣವನ್ನು ಪಾವತಿಸಿಲ್ಲ, ಹೀಗಾದರೆ ಕನ್ನಡದ ಪುಸ್ತಕೊದ್ಯಮ ಮತ್ತು ಸಾಂಸ್ಕೃತಿಕ ಜಗತ್ತು ಅಳಿವಿನಂಚಿಗೆ ಬರಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿ ಬೆರಗು ಸಂಸ್ಥೆ ಈ ಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದೆ, ಪುಸ್ತಕ ಪ್ರಕಟಿಸುವ ಮೂಲಕ ಹೊಸಬರಿಗೂ ಆದ್ಯತೆ ನೀಡುತ್ತಿದೆ, ಪುಸ್ತಕ ಖರೀಯ ಕುರಿತಂತೆ ಮುಖ್ಯಮಂತ್ರಿಗಳ ಹಾಗೂ ಸಚಿವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ವಿಜಯಪುರದ ಸಂಸ್ಕೃತಿ ಚಿಂತಕಿ ಡಾ. ಸರಸ್ವತಿ ಚಿಮ್ಮಲಗಿ ಹಾಗೂ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಅವರು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅಧ್ಯಕ್ಷತೆ ವಹಿಸಿ ಮಾತನಾಡಿದರು ವಿಜಯಪುರದ ಸಾಹಿತಿ ಶಂಕರ ಬೈಚಬಾಳ ಅವರು ಪುಸ್ತಕಗಳನ್ನು ಪರಿಚಯಿಸಿದರು .
ಸಿಂದಗಿಯ ರಾಘವೇಂದ್ರ ಕುಲಕರ್ಣಿ, ಪ್ರೊ.ಶ್ರೀಶೈಲ ನಾಗರಾಳ ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಕತ್ತಿ, ಪ್ರಚಾರ್ಯ ಎ.ಆರ್.ಹೆಗ್ಗನದೊಡ್ಡಿ ಉಪಸ್ಥಿತರಿದ್ದರು.
ಬೆರಗು ಪ್ರಕಾಶನ ಸಂಚಾಲಕ ಡಾ. ರಮೇಶ ಎಸ್. ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಸಿದ್ಧಲಿಂಗ ಕಿಣಗಿ ನಿರೂಪಿಸಿದರು. ಮುಕ್ತಾಯಕ್ಕ ಕತ್ತಿ ಸ್ವಾಗತಿಸಿದರು. ಅವಧೂತ ಬಂಡಗಾರ ವಂದಿಸಿದರು.
ಪ್ರಶಸ್ತಿ ಪುರಸ್ಕೃತರು
ಎಂ.ಸಿ.ಮನಗೂಳಿ ಸ್ಮರಣಾರ್ಥ ದತ್ತಿ ೨೦೨೪ರ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ (೨೫ಸಾವಿರ ನಗದು ಮತ್ತು ಪ್ರಶಸ್ತಿ ಫಲಕ), ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಯನ್ನು ಸಿಂದಗಿಯ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರಿಗೆ ೧೦ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.
ಕತೆ ವಿಭಾಗ:ಬೆಂಗಳೂರಿನ ಡಾ.ಲಕ್ಷ್ಮಣ ವಿ ಎ ಅವರ ಜಿರಿ ಮಳೆಯ ಕಣ್ಣು ೧೦ಸಾವಿರ ರೂ.ನಗದು, ಪ್ರಶಸ್ತಿ ಫಲಕ ಮತ್ತು ಕೃತಿ ಪ್ರಕಟಣೆ, ಕಾವ್ಯ ವಿಭಾಗದಲ್ಲಿ ಬೆಂಗಳೂರಿನ ಭಾಗ್ಯ ವಸು ಅವರ ರೆಪ್ಪೆಗಂಬದ ಮೇಲೆ ಕೂತ ಮರಿ ಹಕ್ಕಿ ಕೃತಿಗೆ ರೂ.೫ಸಾವಿರ ನಗದು ಪ್ರಶಸ್ತಿ ಫಲಕ ಮತ್ತು ಕೃತಿ ಪ್ರಕಟಣೆ, ಯುವ ಕಾವ್ಯ:ಕಲಬುರಗಿಯ ಪಿ.ನಂದಕುಮಾರ ಅವರ ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ ರೂ. ೫ಸಾವಿರ ನಗದು ಪ್ರಶಸ್ತಿ ಫಲಕ ಮತ್ತು ಕೃತಿ ಪ್ರಕಟಣೆಯೊಂದಿಗೆ ಪ್ರಶಸ್ತಿ ಪ್ರದಾನ ದಿ.ಯಮುನಾಬಾಯಿ ರಾಜಣ್ಣ ಭೋವಿ ಸ್ಮರಣಾರ್ಥ ದತ್ತಿ ೨೦೨೩ರ ಸಾಲಿನ ರಾಜ್ಯಮಟ್ಟದ ಬೆರಗು ಪುಸ್ತಕ ಪ್ರಶಸ್ತಿಯನ್ನು ದಾವಣಗೆರೆಯ ಮಲ್ಲಿಕಾರ್ಜುನ ಕಡಕೋಳ ಅವರ ಪರಿಮಳದ ಹಾದಿಯ ಪಯಣಿಗರು ಕೃತಿಗೆ ಹಾಗೂ ದಿ. ಬಂಡೆಪ್ಪ ಕತ್ತಿ ಸ್ಮರಣಾರ್ಥ ನೀಡುವ ೨೦೨೪ನೇ ಸಾಲಿನ ಬೆರಗು ಮುಖಪುಟ ವಿನ್ಯಾಸ ಪ್ರಶಸ್ತಿಯನ್ನು ವಾಸುದೇವ ರಾಹುತ್ ಗದಗ ಅವರಿಗೆ ರೂ.೫ಸಾವಿರ ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಪ್ರೊ.ಮಲ್ಲೆಪುರಂ ವೆಂಕಟೇಶ ಪ್ರದಾನ ಮಾಡಿದರು.
ಬಿಡುಗಡೆಯಾದ ಪುಸ್ತಕಗಳು
ನಾನೂ ಕಾಶ್ಮೀರಕ್ಕೆ ಹೋಗಿದ್ದೆ (ಮಕ್ಕಳ ಪ್ರವಾಸ ಕಥನ)ಲೇ:ನಮ್ರತಾ ಆರ್. ಕತ್ತಿ, ವಿಳಾಸವಿರದ ವೇದನೆಗಳು(ಗಜಲ್)ಲೇ:ಪಾರ್ವತಿ ಎಸ್. ಬುದೂರ, ಮಹಿಳಾ ಮೀಸಲಾತಿ; ಪ್ರಸ್ತುತತೆ, ಸಂ: ಡಾ.ಸರಸ್ವತಿ ಚಿಮ್ಮಲಗಿ, ಗಾಯತ್ರಿ ಜಿ. ಪತ್ತಾರ, ಪಡಿನುಡಿ(ವಿಮರ್ಶೆ)ಲೇ:ಅನುಸೂಯ ಯತೀಶ್, ಜಿರಿ ಮಳೆಯ ಕಣ್ಣು(ಕತೆ)ಲೇ:ಡಾ.ಲಕ್ಷö್ಮಣ ವಿ ಎ, ರೆಪ್ಪೆಗಂಬದ ಮೇಲೆ ಕೂತ ಮರಿಹಕ್ಕಿ,(ಕಾವ್ಯ)ಲೇ:ಭಾಗ್ಯವಸು, ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ(ಕಾವ್ಯ), ಲೇ:ಪಿ.ನಂದಕುಮಾರ, ಪಂಜಾಸವಾರಿ(ಕಾದಂಬರಿ)ಲೇ:ಡಾ.ಮಿರಾಜಪಾಶಾ, ಭಂಡಬಹಳ ಮಾಡ್ತಿದಿ ಭೂಪ(ತತ್ವಪದ)ಲೇ:ಇಸ್ಮಾಯಿಲ್ ಮೋರಟಗಿ, ದಾರಿ ದೀವಿಗೆ(ಲೇಖನ)ಲೇ:ನಾಗೇಶ್‌ನಾಯಕ, ಗಜಲ್ ಗಮಲು(ವಿಮರ್ಶೆ)ನಾಗೇಶ್ ಜೆ. ನಾಯಕ, ನಾನು ಅನುಭವಿಸಿದ ವಿಸ್ಮಯಗಳು(ಪ್ರಬಂಧ)ಲೇ:ಡಾ.ಸವಿತಾ ಸಿರಗೋಜಿ, ಯಶವಂತ ಚಿತ್ತಾಲರ ಕಥನ;ಮಾನವೀಯ ಸಂಬಂಧಗಳು(ಸಂಶೋಧನೆ)ಲೇ:ಡಾ. ಮೇಘನಾ ಕೆ, ಹುತ್ತಗಟ್ಟಿದ ಚಿತ್ತ(ವಿಮರ್ಶೆ)ಲೇ:ಡಾ. ಮೇಘನಾ.ಕೆ, ಬಿರು ನೆಲದ ಕಾವ್ಯ, (ಕಾವ್ಯ ಟಿಪ್ಪಣಿ)ಸಂ:ಡಾ.ರಮೇಶ ಎಸ್. ಕತ್ತಿ, ಬೆಟಗೇರಿ ಕೃಷ್ಣಶರ್ಮ ಸೃಜನೇತರ ಸಾಹಿತ್ಯ(ಸಂಶೋಧನೆ)ಲೇ:ಡಾ.ಮಹಾನಂದ ಪಾಟೀಲ, ಮಣ್ಣಿಗೂ ಮೇಲಿಗೆ(ಕತೆ)ಲೇ:ಶಿವಪುತ್ರ ಅಜಮನಿ, ಸೈಂಧವ ರಾಜಾ (ಬಯಲಾಟ)ಸಂ:ಡಾ.ಸಂಗಣ್ಣ ಸಿಂಗೆ, ಅಫಜಲಪುದ ಸಾಹಿತ್ಯ ಸಾಧಕರು(ವ್ಯಕ್ತಿಚಿತ್ರಣ)ಲೇ:ಡಾ.ಸಂಗಣ್ಣ ಸಿಂಗೆ, ಒಂದು ರಾತ್ರಿಯ ಅಂತರ(ಅನುವಾದ)ಲೇ:ಶಿವಾನಂದ ದಾಸ್ಯಾಳ, ಹಿಂದಿ ಮೂಲ:ಡಾ.ಸುಭಾಷ ಪಂಥ.

