ಓರ್ವನ ಕಾಲಿಗೆ ಗುಂಡು | ಗಾಯಾಳು ವಶಕ್ಕೆ | ಮೂವರು ಪರಾರಿ | ನಗರವಾಸಿಗಳಲ್ಲಿ ಮುಂದುವರೆದ ಆತಂಕ | ಪೊಲೀಸರ ಸಾಹಸಕ್ಕೆ ನಾಗರಿಕರ ಪ್ರಶಂಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಪೊಲೀಸರ ಗುಂಡಿನ ಮೊರೆತ ಕೇಳಿದೆ. ಕಳೆದ ಐದು ದಿನಗಳಿಂದ ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಡಕಾಯಿತರ ಗ್ಯಾಂಗ್ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಓರ್ವ ದುರುಳನ ಕಾಲಿಗೆ ಗುಂಡು ತಗುಲಿ ಆಸ್ಪತ್ರೆ ಪಾಲಾಗಿದ್ದು, ಇನ್ನು ಮೂವರು ಪರಾರಿಯಾಗಿದ್ದಾರೆ. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ದರೋಡೆಕೋರರ ತಂಡ ಪ್ರತಿದಿನ ಒಂದೊಂದು ಪ್ರದೇಶದಲ್ಲಿ ದಾಳಿ ಮಾಡಿ ಚಿನ್ನಾಭರಣ ದೋಚುತ್ತಿತ್ತು. ವಿಜಯಪುರ ಪೊಲೀಸರಿಗೆ ಸವಾಲಾಗಿದ್ದ, ಈ ಗ್ಯಾಂಗ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡಿನ ದಾಳಿ ಮಾಡಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ನಗರದ ಟೋಲ ನಾಕಾ ಬಳಿ ಬೆಳಗಿನ ಜಾವ 3 ಗಂಟೆಗೆ ಪರಾರಿಯಾಗುತ್ತಿದ್ದ ದರೋಡೆಕೋರ ಮೇಲೆ ಗುಂಡು ಹಾರಿಸಲಾಗಿದೆ. ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಮನೆ ದರೋಡೆಗೆ ಬಂದಿದ್ದ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಆರಕ್ಷಕರು ಖದೀಮರನ್ನ ಬೆನ್ನಟ್ಟಿದ್ದು, ನಗರದ ಹೊರವಲಯದ ಟೋಲ್ ನಾಕಾ ಬಳಿ ಪರಾರಿಯಾಗುವ ವೇಳೆ ಗುಂಡೇಟು ನೀಡಲಾಗಿದ್ದು, ಮಧ್ಯಪ್ರದೇಶ ಮೂಲದ ಮಹೇಶ್ ಎಂಬಾತನಿಗೆ ಗುಂಡು ತಗುಲಿವೆ. ಉಳಿದ ಮೂವರು ಪರಾರಿಯಾಗಿದ್ದು, ಅವರ ಶೋಧಕ್ಕಾಗಿ ತಂಡಗಳನ್ನ ರಚನೆ ಮಾಡಲಾಗಿದೆ.
ತೊಗರಿ ಹೊಲದಲ್ಲಿ ಓಡಿ ಹೋಗುತ್ತಿದ್ದ ಆರೋಪಿಗಳ ಮೇಲೆ ಫೈರಿಂಗ್ ಮಾಡುವ ವೇಳೆ ಕತ್ತಲಾಗಿದ್ದ ಕಾರಣ, ಗುಂಡೇಟು ತಿಂದವನು ಕಂಡಿರಲಿಲ್ಲ. ಬೆಳಿಗ್ಗೆ ಅದೇ ಜಾಗದಲ್ಲಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡೇಟು ಬಿದ್ದ ಆರೋಪಿಯು ಅಲ್ಲೆ ಕುಸಿದು ಬಿದಿದ್ದ. ಬಳಿಕ ಆತನನ್ನು ವಶಕ್ಕೆ ಪಡೆದ ಪೋಲೀಸರು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಸದ್ಯ ಓರ್ವ ಪೊಲೀಸರಿಗೆ ತಗಲಾಕೊಂಡಿದ್ದು, ಉಳಿದವರನ್ನ ಆದಷ್ಟು ಬೇಗ ಬಂಧಿಸಬೇಕಾಗಿದೆ. ಜನರಿಗೆ ಖದೀಮರ ಬಗ್ಗೆ ಇರುವ ಭಯ ಹೋಗಲಾಡಿಸಬೇಕಿದೆ.
ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.

ಗಸ್ತು ಹೆಚ್ಚು ಮಾಡಲು ಮನವಿ
ಕಳೆದ ರಾತ್ರಿ ವಿಜಯಪುರದ ಜೈನಾಪುರ ಲೇಔಟ್ ನಲ್ಲಿ ಸಂತೋಷ ಎನ್ನುವವರ ಮನೆಗೆ ದಾಳಿ ಮಾಡಿದ್ದ ಖದೀಮರು ಅವರಿಗೆ ಚಾಕು ಇರಿದು ಅವರ ಪತ್ನಿ ಬಳಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಪ್ರಕರಣ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಅತ್ಯಂತ ಕಠಿಣ ಚಾಲೆಂಜ್ ಸ್ವೀಕರಿಸಿದ ಪೊಲೀಸರು ಖದೀಮರ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಿದ್ದರು. ಕಾರ್ಯಾಚರಣೆ ನಡೆಸಿದ ಸಿಪಿಐ ಮಲ್ಲಯ್ಯ ಮಠಪತಿ
ಕೊನೆಗೂ ಆರೋಪಿಗಳಿಗೆ ಗುಂಡೇಟು ನೀಡಿದ್ದಾರೆ. ಇನ್ನು ದರೋಡೆಕೋರರು ಉಳಿದವರು ಪರಾರಿಯಾಗಿದ್ದರ ಬಗ್ಗೆ ನಗರದ ಜನರಲ್ಲಿ ಆತಂಕ ಮುಂದುವರೆದಿದ್ದು, ಗಸ್ತು ಹೆಚ್ಚು ಮಾಡುವಂತೆ ಮನವಿ ಮಾಡಿದ್ದಾರೆ.

“ತಪ್ಪಿಸಿಕೊಳ್ಳುತ್ತಿದ್ದ ಮುಸುಕುಧಾರಿಗಳ ಮೇಲೆ ಐದು ಸುತ್ತು ಗುಂಡಿನ ದಾಳಿ ನಡೆಸಲಾಗಿದೆ. ಓರ್ವನ ಕಾಲಿಗೆ ಮೂರು ಗುಂಡು ತಗುಲಿವೆ. ಮುಸುಕುಧಾರಿ ಗ್ಯಾಂಗ್ ಸಂಬಂಧ ಈವರೆಗೆ ಮೂರು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ದರೋಡೆಕೋರರ ಬಂಧನಕ್ಕೆ ತಂಡಗಳ ರಚನೆ ಮಾಡಿದ್ವಿ. ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಗುಂಡು ಹಾರಿಸಿ ಓರ್ವ ದರೋಡೆಕೋರನನ್ನು ಬಂಧಿಸಿದ್ದಾರೆ. ಮಹೇಶ ಎಂಬ ವ್ಯಕ್ತಿ ಬಂಧಿತ ಆರೋಪಿಯಾಗಿದ್ದು, ಮಧ್ಯಪ್ರದೇಶ ಮೂಲದವರು ಎಂದು ತಿಳಿದುಬಂದಿದೆ. ಉಳಿದ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದೇವೆ.”
– ಲಕ್ಷ್ಮಣ ನಿಂಬರಗಿ
ಎಸ್ಪಿ ವಿಜಯಪುರ

