ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಿಜಾಪುರ ಜಿಲ್ಲೆಯ ೨೦೨೪-೨೭ ರ ಅವಧಿಗೆ ನೂತನ ಅಧ್ಯಕ್ಷರಾಗಿ ಅತಾವುಲ್ಲಾ ದ್ರಾಕ್ಷಿ, ಉಪಾಧ್ಯಕ್ಷರಾಗಿ ಸಮೀರ್ ಹುಣಸಗಿ ಮತ್ತು ನಾಜಿಯಾ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಸಾರ್ ಅಹ್ಮದ್ ಮನಿಯಾರ್ ಮತ್ತು ಮೆಹಬೂಬ್ ಕೋಲಾರ್, ಕಾರ್ಯದರ್ಶಿಯಾಗಿ ಅಡ್ವೋಕೇಟ್ ಸಮೀಉಲ್ಲಾ ಬಡೇಘರ್, ಕೋಶಾಧಿಕಾರಿಯಾಗಿ ಇಸಾಕ್ ಸಯ್ಯದ್ ಹಾಗೂ ಸಮಿತಿ ಸದಸ್ಯರುಗಳಾಗಿ ಅಡ್ವೋಕೇಟ್ ಗೌಸ್ ಜಕಾತಿ, ಎಜಾಜ್ ಮನಿಯಾರ್, ಮುನಾಫ್ ಪಠಾಣ, ಸೈಫನ್ ಮುಲ್ಲಾ, ಉಮರಖಾನ್ ಪಠಾಣ್, ಯಾಸಿರ್ ಇನಾಮದಾರ್, ನಾಮನಿರ್ದೇಶಿತ ಸದಸ್ಯರಾಗಿ ಉಮರ್ ಪುಣೇಕರ್ ರವರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು, ಎಸ್‌ಡಿ ಪಿಐ ರಾಜ್ಯ ಕಾರ್ಯದರ್ಶಿಯಾದ ರಂಜಾನ್ ಕಡಿವಾಳ್‌ರವರು ನಡೆಸಿಕೊಟ್ಟರು.
ಜಿಲ್ಲಾ ಪ್ರತಿನಿಧಿ ಸಭೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆರವರು ಉದ್ಘಾಟಿಸಿ ಮಾತನಾಡಿ, ಬಾಗಲಕೋಟೆಯ ಜಮಖಂಡಿಯಲ್ಲಿ ನಡೆದಿದ್ದ ಬಂದೂಕು ತರಬೇತಿಗೆ ಸಂಬಂಧಿಸಿದಂತೆ ಕೇವಲ ೨೭ ಜನರ ವಿರುದ್ಧ ಕೇಸ್ ದಾಖಲಿಸಿ ಕೈ ತೊಳೆದುಕೊಂಡಿರುವ ಸರಕಾರ ಯಾಕೆ ಈ ಪ್ರಕರಣವನ್ನು ಸಿಓಡಿ ತನಿಖೆ ವಹಿಸಿಲ್ಲ? ಬಂದೂಕು ತರಬೇತಿಯಂತಹ ಶಿಬಿರದ ಮೂಲಕ ಭಯವನ್ನು ಹುಟ್ಟಿಸುವ ಕೆಲಸ ನಡೆಯುತ್ತಿದ್ದರೂ ಗೃಹ ಇಲಾಖೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.
ಜನಪರ ಹೋರಾಟಗಾರರ ಸಾಲು ಸಾಲು ಜಾಮೀನು ಅರ್ಜಿಗಳು ಧೂಳು ಮುಕ್ಕುತ್ತಿವೆ. ಆದರೆ ಗೌರಿಹತ್ಯೆ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ದೊರಕುತ್ತಿರುವುದು ವಿಷಾದನೀಯ. ಗೌರಿಹತ್ಯೆ ಆರೋಪಿಗಳಿಗೆ ನೀಡಿರುವ ಜಾಮೀನು ಇವರಲ್ಲಿ ಇನ್ನಷ್ಟು ಕೊಲೆಗಳನ್ನು ನಡೆಸಲು ಧೈರ್ಯ ನೀಡಿದಂತಾಗುತ್ತದೆ ಹಾಗಾಗಿ ಜಾಮೀನು ರದ್ದು ಮಾಡುವಂತೆ ತಕ್ಷಣ ಈ ಬಗ್ಗೆ ಸರಕಾರ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಪಕ್ಷದ ಕಳೆದ ಒಂದುವರೆ ವರ್ಷಗಳ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅಗತ್ಯ ಸಲಹೆಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಯಿತು.
ಬಿಜಾಪುರ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಸಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಿಷ್ಠಗೊಳಿಸಲು ಚರ್ಚೆ ನಡೆಸಲಾಯಿತು.

