ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ಸ್ಪ್ರಿಂಕ್ಲರ್ ಪೈಪ್‌ಗಳ ಗುಣಮಟ್ಟದಲ್ಲಿ ಸಂಪೂರ್ಣ ವಿಫಲವಾಗಿದ್ದು ಕಳಪೆ ಆಗಿವೆ ಎಂದು ಸಿಪೆಟ್‌ದಿಂದ ವರದಿ ಬಂದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಯಾರಿಸಿದ ಕಂಪನಿಯವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಇದನ್ನು ಗಮನಿಸಿದರೆ ಕಂಪನಿಯವರೊಂದಿಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಿಲಾಪೆ ಆಗಿದ್ದಾರೆಂದು ಸ್ಪಷ್ಟವಾಗುತ್ತದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಆರೋಪಿಸಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೨ ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿದ್ದು. ಹೋರಾಟವನ್ನು ಗಮನಿಸಿದ ಕೃಷಿ ಇಲಾಖೆಯ ಆಯುಕ್ತರು ಸ್ಪ್ಪಿಂಕ್ಲರ್ ಪೈಪ್‌ಗಳನ್ನು ತಪಾಸಣೆಗೆ ಕಳುಹಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ವಿವಿಧ ಕಂಪನಿಗಳ ಸ್ಪ್ರಿಂಕ್ಲರ್ ಪೈಪ್‌ಗಳ ಮಾದರಿಯನ್ನು ಕಲೆ ಹಾಕಿ ಗುಣಮಟ್ಟ ತಪಾಸಣೆಗೆ ಸಿಪೆಟ್‌ಗೆ ಕಳುಹಿಸಿದ್ದರು. ಆದರೆ ವರದಿ ಏನೆಂಬುದನ್ನು ನಮಗೆ ಕೊಟ್ಟಿಲ್ಲ. ಬಂದ ವರದಿಯನ್ನು ರೈತ ಮುಖಂಡರಿಗೆ ಒದಗಿಸಿರಿ ಎಂದು ಹೇಳಿದರು ಕೂಡಾ ನಮಗೆ ವರದಿ ನೀಡಿಲ್ಲ. ಮೇಲಾಧಿಕಾರಿಗಳ ಅನುಮತಿ ಪಡೆದು ತಮಗೆ ಸಿಪೆಟ್ ವರದಿ ಕೊಡಲಾಗುವುದು ಎಂದು ಸಬೂಬು ಹೇಳುತ್ತಿದ್ದಾರೆ. ಇವರ ವಿಳಂಬ ನೀತಿ ಗಮನಿಸಿದರೆ ಉದ್ದೇಶ ಪೂರ್ವಕವಾಗಿ ಸತ್ಯಾಂಶವನ್ನು ಹೊರಗೆ ಹಾಕಬಾರದೆಂಬ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯಾದ್ಯಂತ ಎಲ್ಲ ಕಂಪನಿಗಳು ಕೂಡಾ ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ತಯಾರಿಸಿ ರೈತರಿಗೆ ಮೋಸ ಮಾಡಿ ಕಂಪನಿಯವರು ಕೋಟ್ಯಾಂತರ ಹಣ ಲೂಟಿ ಮಾಡಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಮಹಾತ್ವಾಂಕಾಕ್ಷಿ ಯೋಜನೆ ಹಳ್ಳ ಹಿಡಿದಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕುರಿತು ಗಂಬೀರವಾಗಿ ಪರಿಗಣಿಸಿ ತಪ್ಪಿತಸ್ತ ಕಂಪನಿಯವರ ಮೇಲೆ ಕಾನೂನು ಕ್ರಮ ಜರುಗಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ ಎಂದರು
ಈ ವೇಳೆ ಮುಖಂಡರಾದ ಪ್ರಹ್ಲಾದ ನಾಗರಾಳ, ರಾಮನಗೌಡ ಪಾಟೀಲ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ರಾಜೇಸಾ ನದಾಫ, ಸಂಗಪ್ಪ ಟಕ್ಕೆ, ಜಯಸಿಂಗ ರಜಪೂರ, ಆತ್ಮಾನಂದ ಭೈರೊಡಗಿ, ಸೋಮು ಬಿರಾದಾರ, ಬಸವರಾಜ ನ್ಯಾಮಗೊಂಡ, ಜಕರಾಯ ಪೂಜಾರಿ, ಸೇರಿದಂತೆ ಇತರರು ಇದ್ದರು.

