ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ದಿಂದ ನಗರ ಮತಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸುವ ಮಹತ್ತರ ಕಾರ್ಯ ಕೈಗೊಳ್ಳಲಾಗುತ್ತಿದೆ.
ಇದೇ ಜನವರಿ 18 ರ ಶನಿವಾರ ಬೆಳಿಗ್ಗೆ 8.30 ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ, ನಗರ ಶಾಸಕರು ಮಕ್ಕಳಿಗೆ ವಿಮೆ ಪ್ರಮಾಣ ಪತ್ರ ವಿತರಿಸುವರು.
ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಗರ ವಲಯದ 7 ಪ್ರೌಢ ಶಾಲೆಗಳು ಹಾಗೂ 119 ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 14,331 ಮಕ್ಕಳು ಹಾಗೂ ಗ್ರಾಮೀಣ ವಲಯ ವ್ಯಾಪ್ತಿಯ 9 ಪ್ರಾಥಮಿಕ ಶಾಲೆಗಳ 968 ಮಕ್ಕಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈಗಾಗಲೇ ಎಸ್.ಬಿ.ಐ ಚಾಲುಕ್ಯ ನಗರ ಶಾಖೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಮಕ್ಕಳನ್ನು ವಿಮೆಗೆ ಒಳಪಡಿಸಲಾಗಿರುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಗುಂಪು ವಿಮಾ ಸೌಲಭ್ಯ ಕಲ್ಪಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಥಮ ಹಾಗೂ ಮಾದರಿ ಕಾರ್ಯವಾಗಿದೆ. ಈ ವಿಮಾ ಯೋಜನೆಯಿಂದ ಅಪಘಾತ, ಹಾವು, ಚೋಳ ಕಡಿತ, ವಿದ್ಯುತ್ ಶಾಖ್ ಮತ್ತಿತರೆ ಕಾರಣಗಳಿಂದ ಸಂಭವಿಸುವ ದುರ್ಘಟನೆಯಲ್ಲಿ ಮಕ್ಕಳು ಮೃತಪಟ್ಟರೆ, ಅವಲಂಬಿತರಿಗೆ ರೂ.2 ಲಕ್ಷ ಪರಿಹಾರ ಹಾಗೂ ಗಂಭೀರವಾಗಿ ಗಾಯಗೊಂಡ ಮಕ್ಕಳ ಚಿಕಿತ್ಸೆಗಾಗಿ ರೂ.1 ಲಕ್ಷ ವರೆಗೆ ಪರಿಹಾರ ಮೊತ್ತ ದೊರೆಯಲಿದೆ.
ವಿಜಯಪುರ ನಗರದಲ್ಲಿ ಈಚೆಗೆ ಕೊಳಚೆ ನೀರು ಸಂಸ್ಕರಣ ಘಟಕದಲ್ಲಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಬಳಿಕ, ವಿಮಾ ಸೌಲಭ್ಯದಿಂದ ಮಕ್ಕಲು ವಂಚಿರಾಗದಿರಲೆಂದು ಯೋಚನೆ ಮಾಡಿರುವ ಶಾಸಕರು, ಜಾತಿ, ಧರ್ಮ ಎನ್ನದೆ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಧ್ಯಮಿಕ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ, ತಮ್ಮ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ಸಂಪೂರ್ಣ ವಿಮಾ ಮೊತ್ತ ಪಾವತಿಸಿ, ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿ ವರ್ಷ ಈ ವಿಮೆ ನವೀಕರಿಸಲಾಗುತ್ತದೆ ಎಂದು ನಗರ ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.

