ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಎಸ್. ಬಳೋಲಮಟ್ಟಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿನ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಎನ್.ಎಂ.ಎಂ.ಎಸ್ ಪರೀಕ್ಷೆಗೆ ನೊಂದಾಯಿಸಿದ 1501 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸ್ಪೂರ್ತಿ ಕರಿಯರ ಅಕಾಡೆಮಿ ಧಾರವಾಡದ ಕಾಶಿರಾಜ್ ಅವರನ್ನು ಕರೆಸಿ ಬಬಲೇಶ್ವರ ಪಟ್ಟಷದ ಶಾಂತವೀರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ (ಪ್ರೌಢ ವಿಭಾಗ ) ಬುಧವಾರ ಒಂದು ದಿನದ ಕಾರ್ಯಗಾರವನ್ನು ಏರ್ಪಡಿಸಲಾಯಿತು.
2024- 25 ನೇ ಸಾಲಿನಲ್ಲಿ ನಮ್ಮ ತಾಲ್ಲೂಕಿನಿಂದ ಅತಿ ಹೆಚ್ಚಿನ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿ ನಮ್ಮ ತಾಲ್ಲೂಕಿಗೆ ಹೆಸರನ್ನು ತರಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರವು ಕೊಡ ಮಾಡುವ ಪ್ರತಿ ವರ್ಷ ₹ 12000 ಗಳು, ಈ ರೀತಿಯಾಗಿ ನಾಲ್ಕು ವರ್ಷಗಳಲ್ಲಿ ₹ 48000 ಶಿಷ್ಯ ವೇತನವನ್ನು ಪಡೆಯುವಂತಾಗಬೇಕೆಂದು ಆಶಿಸುತ್ತಾ ಈ ಕಾರ್ಯಗಾರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಪರೀಕ್ಷೆ ನೋಡಲ್ ಪ್ರಭು ಬಿರಾದಾರ ಮಾತನಾಡಿ 2023-24 ನೇ ಸಾಲಿನಲ್ಲಿ ಬಿಇಓ ಅವರ ವಿಶೇಷ ಕಾಳಜಿಯಿಂದ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಮಕ್ಕಳು ಈ ಪರೀಕ್ಷೆಯಲ್ಲಿ ಪಾಸಾಗಿ ಶಿಷ್ಯವೇತನ ಪಡೆಯುತ್ತಿದ್ದಾರೆ. ಈ ವರ್ಷ ನಮ್ಮ ತಾಲ್ಲೂಕಿನ ವಿಶೇಷ ತರಬೇತಿ ಪಡೆದ 170 ಟಿಜಿಟಿ, ಜಿಪಿಟಿ ಶಿಕ್ಷಕರನ್ನು ತಮ್ಮ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ದಿನಗಳಂದು ನಿಯೋಜನೆ ಮಾಡಿ ವಿಶೇಷ ತರಬೇತಿ ಕೊಡುತ್ತಿದ್ದಾರೆ. ಈ ತಿಂಗಳ ಕೊನೆಗೆ ಒಂದು ಮಾದರಿ ಪರೀಕ್ಷೆ ತೆಗೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಉತ್ತಿರ್ಣವಾಗುವಂತೆ ಮಾಡಲಾಗುವುದು ಎಂದು ಹೇಳಿದರು.
ಪ್ರಾಚಾರ್ಯ ಸಿದ್ದನಗೌಡ ಬಿರಾದಾರ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಮಾನ್ಯ ಬಿಇಓ ಅವರ ಮಕ್ಕಳ ಮೇಲಿನ ಕಾಳಜಿಯಿಂದ ಇಡೀ ವರ್ಷ ನುರಿತ ರಾಜ್ಯ, ಜಿಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ವಿಶೇಷ ತರಬೇತಿ ಕೊಡಿಸಿ ಅತಿ ಹೆಚ್ಚಿನ ಮಕ್ಕಳು ಉತ್ತೀರ್ಣರಾಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಮಾನ್ಯ ಬಿಇಓ ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ತಾಲೂಕಿನ ಎನ್ಎಂಎಂಎಸ್ ನೋಡಲ್ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಸ್ವಾಗತವನ್ನು ಎಚ್.ಬಿ.ಬಡಿಗೇರ, ನಿರೂಪಣೆಯನ್ನು ಎಂ.ವಿ. ನಾಯಕೋಡಿ, ವಂದನಾರ್ಪಣೆಯನ್ನು ಎಂ. ಬಿ. ಹೊಸಮನಿ ನೆರವೇರಿಸಿದರು.

