ಶಾಸಕ ಸಿ.ಎಸ್.ನಾಡಗೌಡರಿಗೆ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸವಾಲು
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನನ್ನ ಜೀವಮಾನದಲ್ಲಿ ನಾನು ಮಾತ್ರ ಅಲ್ಲ, ನಮ್ಮ ಮನೆಯ ನಾಯಿ ಕೂಡ ನಿಮ್ಮ ಮನೆಗೆ ಬಂದಿಲ್ಲ ಎಂದು ಮಾಜಿ ಶಾಸಕ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪತ್ರಿಕಾಗೋಷ್ಟಿ ನಡೆಸಿ ನೀವು ಮಾತನಾಡುವಾಗ ಈ ಮಾತನ್ನು ನೀವು ಬಳಸಿದ್ದೀರಿ. ೨೦ ವರ್ಷದ ಹಿಂದೆ ನೀವೇ ದೊಡ್ಡವರು ಅಂತಾ ನನ್ನ ಬಳಿ ಬಂದಿರುವುದಾಗಿ ತಿಳಿಸಿದ್ದೀರಿ. ನಿಮ್ಮ ಮನೆಗೆ ಬಂದಿರುವ ಒಂದು ಸಾಕ್ಷಿಯನ್ನ ನೀಡಿದರೆ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುವೆ ಎಂದು ಶಾಸಕ ಸಿ.ಎಸ್.ನಾಡಗೌಡರಿಗೆ ಸವಾಲು ಹಾಕಿದರು.
ಮಾತನಾಡಬೇಕಾದರೆ ಬಹಳ ಎಚ್ಚರದಿಂದ ಮಾತಾಡಿ. ನಾನು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಜಿಲ್ಲೆಯ ಯಾವ ರಾಜಕೀಯ ನಾಯಕರ ಮನೆಗೂ ಹೋಗಿಲ್ಲ, ನನ್ನ ಸ್ವಂತ ಶಕ್ತಿಯಿಂದ ಬಂದಿದ್ದು. ನಾನು ಯಾವತ್ತು ನಿಮ್ಮ ಬಾಗಿಲಿಗೆ ಬಂದಿದ್ದೆ? ಸುಳ್ಳು ಹೇಳ್ತೀರಿ, ನಿಮ್ಮ ಮನೆ ಎಲ್ಲಿದೆ ಅಂತ ಗೊತ್ತಿಲ್ಲ ನನಗೆ. ಅಲ್ಲದೇ ಮತ್ತೊಂದು ಮಾತು ಹೇಳ್ತೀರಿ ನನ್ನನ್ನು ಯಾವತ್ತೂ ಶಾಸಕನನ್ನಾಗಿಸಲು ಬಿಡುವದಿಲ್ಲ ಎಂದು ನಿಮ್ಮ ಆಶಿರ್ವಾದ ನನಗೆ ಬೇಕಾಗಿಲ್ಲ. ಸುಳ್ಳು ಹೇಳಿ ರಾಜಕಾರಣ ಮಾಡಬೇಡಿ. ನಾನು ಜನಪರ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿ ಮೇಲೆ ಬಂದಿದ್ದೇನೆ ಎಂದರು.
ನಿನ್ನೆಯ ಪ್ರತಿಭಟನೆ ರಾಜ್ಯದಾದ್ಯಂತ ಆಡಳಿತ ಪಕ್ಷದಲ್ಲಿರುವ ಎಲ್ಲ ಮಂತ್ರಿಗಳ, ಶಾಸಕರ ಮನೆ ಎದುರು ನಡೆಯುತ್ತಿದೆ. ಅದರಂತೆ ಇಲ್ಲೂ ಸಾಂಕೇತಿಕವಾಗಿ ನಡೆದಿದೆ. ಅದನ್ನೇ ಇವರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದೀರಿ. ಹೋರಾಟಗಾರರು ಬಂದಾಗ ಗೌರವಯುತವಾಗಿ ನಡೆದುಕೊಳ್ಳುವದನ್ನು ಬಿಟ್ಟು ಪೊಲೀಸರಿಗೆ ಹಚ್ಚಿ ದೌರ್ಜನ್ಯ ನಡೆಸಿರಿವದು ಖಂಡನೀಯ, ರಾಜಕಾರಣದಲ್ಲಿ ಪೊಲೀಸರನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೀರಿ. ನಮ್ಮ ಕಾರ್ಯಕರ್ತರ ಮೇಲೆ ಒಂದೂವರೆ ವರ್ಷದಿಂದ ದೌರ್ಜನ್ಯ ಮಾಡ್ಸತ್ತಿದ್ದೀರಿ. ಇದಕ್ಕೆ ತಕ್ಕ ಉತ್ತರ ನಾವು ಕೊಟ್ಟೇ ಕೊಡ್ತೇವೆ ಎಂದರು.
ಈ ವೇಳೆ ಬಿಜೆಪಿ ಪ್ರಮುಖರಾದ ಮಲಕೇಂದ್ರಗೌಡ ಪಾಟೀಲ, ಎಂ.ಎಸ್.ಪಾಟೀಲ, ಪ್ರೇಮಸಿಂಗ್ ಚೌವ್ಹಾಣ, ಮುನ್ನಾಧಣಿ ನಾಡಗೌಡ ಸೇರಿದಂತೆ ಹಲವರು ಇದ್ದರು.

