ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ನಮ್ಮ ತಾಲ್ಲೂಕಿನ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಷ್ಟ್ರದ ನಾನಾ ರಾಜ್ಯಗಳ ಕೊಕ್ಕೊ ತಂಡಗಳನ್ನು ಸೋಲಿಸಿ ದ್ವಿತೀಯ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ, ಇದಕ್ಕೆ ಕಾರಣೀಭೂತರಾದ ಗ್ರಾಮದ ಜನತೆ, ತರಬೇತುದಾರರಿಗೆ, ಕ್ರೀಡಾಪಟುಗಳಿಗೆ ಧನ್ಯವಾದ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರಾವದಗಿ ಹೇಳಿದರು.
ಬುಧವಾರ, ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ರಾಷ್ಟ್ರ ಮಟ್ಟದ ಕೊಕ್ಕೊ ಕ್ರೀಡೆಯಲ್ಲಿ ರಜತ ಪದಕ ಪಡೆದ ಕರ್ನಾಟಕ ತಂಡದ ಎಲ್ಲಾ ೧೨ ಜನ ಕೊಕ್ಕೊ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರ ಎನ್.ಬಿ.ದಾಸರ ಅವರಿಗೆ ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ, ನಿಡಗುಂದಿ ಪಟ್ಟಣ ಪಂಚಾಯ್ತಿ ಹಾಗೂ ಶಿಕ್ಷಕರ ಸಂಘದ ವತಿಯಿಂದ ಜರುಗಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ಆಲಮಟ್ಟಿಯಲ್ಲಿ ಈ ವರ್ಷ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿ ಸಂಘಟಿಸಿದ್ದೇವು, ಮುಂದಿನ ಕೆಲ ವರ್ಷಗಳಲ್ಲಿ ರಾಷ್ಟ್ರದ ಮಟ್ಟದ ಕೊಕ್ಕೊ ಮತ್ತು ಕಬಡ್ಡಿ ಪಂದ್ಯವನ್ನು ಸಂಘಟಿಸಲಾಗುವುದು, ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಹಳ್ಳಿ ಹುಡುಗಿಯರು ಯಾವುದೇ ಕಾರಣಕ್ಕೂ ಶಿಕ್ಷಣ ಹಾಗೂ ಕ್ರೀಡೆಯನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು, ಮುಂದೆ ಭಾರತ ಕೊಕ್ಕೊ ತಂಡ ಪ್ರತಿನಿಧಿಸುವಂತಾಗಬೇಕು, ಅದಕ್ಕೆ ಬೇಕಾದ ಎಲ್ಲಾ ರೀತಿಯ ಆರ್ಥಿಕ ಸಹಕಾರ ನೀಡುವುದಾಗಿ ಘೋಷಿಸಿದರು. ನಾಕೌಟ್ ಹಂತದಲ್ಲಿ ನಮ್ಮ ಹಳ್ಳಿ ಹುಡುಗಿಯರು ದೆಹಲಿಯ ಬಾಲಕಿಯರನ್ನು ಸೋಲಿಸಿದ್ದು ಹೆಮ್ಮೆಯ ವಿಷಯ ಎಂದರು.
ಯುವ ಮುಖಂಡ ಸಂಗಮೇಶ ಬಳಿಗಾರ, ತಾಲ್ಲೂಕು ಪಂಚಾಯ್ತಿ ಇಓ ವೆಂಕಟೇಶ ವಂದಾಲ, ಜಿ.ಸಿ. ಮುತ್ತಲದಿನ್ನಿ ಮಾತನಾಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ವಿಭೂತಿ, ಮುನ್ನಾ ಬೆಣ್ಣಿ, ಗ್ಯಾನಪ್ಪಗೌಡ ಬಿರಾದಾರ, ಮೆಹೆಬೂಬ್ ಬಿಳೇಕುದರಿ, ಬಿ.ಎಸ್.ಯರವಿನತೆಲಿಮಠ, ಎಂ.ಆರ್.ಮಕಾನದಾರ್, ರಾಘವೇಂದ್ರ ವಡವಡಗಿ, ನಾರಾಯಣ ಹುಗ್ಗಿ, ಹನುಮಂತಪ್ಪ ಇಲ್ಯಾಳ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಪಿಡಿಓ ಎ.ಎ.ಖೇಜಿ, ಎನ್.ಬಿ.ದಾಸರ, ಸಿಆರ್ಪಿ ಸುರೇಶ ಹುರಕಡ್ಲಿ, ಆನಂದ ರೇವಡಿ, ಪ್ರಭಾಕರ ಹೆಬ್ಬಾಳ ಮತ್ತೀತರರು ಇದ್ದರು.
ಕರ್ನಾಟಕ ಬಾಲಕಿಯರ ಖೋಖೋ ತಂಡದ ಮುಖ್ಯ ವ್ಯವಸ್ಥಾಪಕರು ಶ್ರೀ ಎಸ್ ಎಸ್ ಅವಟಿ, ಮುಖ್ಯ ಕೋಚ್ ಶ್ರೀ ಈರಪ್ಪ ಹಳಿಗೌಡ್ರ್, ಬಾಲಕಿಯರ ತಂಡದ ವ್ಯವಸ್ಥಾಪಕರು ಶ್ರೀಮತಿ ಎಸ್ ಡಿ ಕನವಳ್ಳಿ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ ಎನ್ ಬಿ ದಾಸರ ಸರ್, ಬೇನಾಳ, ನಿಡಗುಂದಿ ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು, ಕ್ರೀಡಾಭಿಮಾನಿಗಳು, ಶಿಕ್ಷಕ ಬಳಗದವರು ಪಾಲ್ಗೊಂಡಿದ್ದರು.
ಸಾರೋಟದಲ್ಲಿ ಮೆರವಣಿಗೆ
ಎಲ್ಲಾ ೧೨ ಜನ ಕೊಕ್ಕೊ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ನಿಡಗುಂದಿ ಪಟ್ಟಣದಿಂದ ಬೇನಾಳ ಆರ್.ಎಸ್. ಗ್ರಾಮದವರೆಗೆ ೮ ಕಿ.ಮೀವರೆಗೆ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

