ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಲ್ಲ ಸರ್ಕಾರಿ ನೌಕರರ ಹಾಗೂ ಅಧಿಕಾರಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತಹ ವ್ಯವಸ್ಥೆ ರೂಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ ಜಾಧವ ಮಾತನಾಡಿ, ರಾಜ್ಯ ಸರ್ಕಾರದ ಇಲಾಖಾ ಅಧಿಕಾರಿಗಳು ಅವರ ಅಧೀನದ ಅಧಿಕಾರಿಗಳ ಹಾಗೂ ನೌಕರರ ಆಸ್ತಿ ವಿವರಗಳನ್ನು ನೀಡಲು ವಿನಾಕಾರಣ ವಿಳಂಬ ಮಾಡುತ್ತಿರುವುದು ಮತ್ತು ಈ ವಿಚಾರದ ಗೌಪ್ಯತೆ ಕಾಪಾಡದೇ ಅಕ್ರಮ ಆಸ್ತಿ ಗಳಿಸಿರುವ ನೌಕರರ ವಿರುದ್ಧ ತನಿಖೆಯ ದಾರಿ ತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿರುವುದರಿಂದ ಕರ್ನಾಟಕ ಲೋಕಾಯುಕ್ತರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪರಿಹಾರೋಪಾಯವನ್ನು ಸೂಚಿಸಿರುತ್ತಾರೆ . ಈ ವಿಚಾರವಾಗಿ ಅವರು ಎಲ್ಲಾ ಸರ್ಕಾರಿ ನೌಕರರ ಆಸ್ತಿ ವಿವರವನ್ನು ಕಡ್ಡಾಯವಾಗಿ ಪ್ರತಿವರ್ಷ ಸಂಗ್ರಹಿಸಿ, ಆ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ , ಆ ವಿವರಗಳು ನಿರಂತರವಾಗಿ ಲೋಕಾಯುಕ್ತ ಸಂಸ್ಥೆಗೆ ಮುಕ್ತವಾಗಿ ಲಭ್ಯವಾಗುವಂತಹ ವ್ಯವಸ್ಥೆಯನ್ನು ರೂಪಿಸಬೇಕೆಂದು ತಿಳಿಸಿದರು. ಕೆ.ಆರ್.ಎಸ್. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಮಾತನಾಡಿ, ತಮಿಳುನಾಡು ಸರ್ಕಾರದಂತೆ, ಇಲ್ಲಿಯೂ ಕೂಡ ನೌಕರರ ಆಸ್ತಿ ಮತ್ತು ಸರ್ವಿಸ್ ರೆಕಾರ್ಡ್ ವಿವರಗಳನ್ನು ಮಾಹಿತಿ ಹಕ್ಕಿನಲ್ಲಿ ನೀಡಲು ನಿರಾಕರಿಸಲಾಗುತ್ತಿದೆ. ಈ ತೀರ್ಪಿನ ಅನ್ವಯದಂತೆ ಪ್ರಸ್ತುತ ಲೋಕಾಯುಕ್ತರ ಕೋರಿಕೆಯು ಸಮಂಜಸವಾಗಿದ್ದು, ಇದನ್ನು ನಿರಾಕರಿಸಲು ಕಾನೂನಿನಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ. ರಾಜ್ಯದಲ್ಲಿ ಯಾವುದೇ ಲಂಗು ಲಗಾಮಿಲ್ಲದ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ಹತೋಟಿಗೆ ತರಲು ಸರ್ಕಾರವು ಯಾವುದೇ ಕ್ರಮ ವಹಿಸುತ್ತಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ಮಾನ್ಯ ಲೋಕಾಯುಕ್ತರ ಸಲಹೆ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪರಿಗಣಿಸಿ , ಎಲ್ಲಾ ಸರ್ಕಾರಿ ನೌಕರರ ಆಸ್ತಿ ವಿವರಗಳು ಲೋಕಾಯುಕ್ತ ಸಂಸ್ಥೆಯ ಜೊತೆಗೆ ಸಾರ್ವಜನಿಕರಿಗೂ ಲಭ್ಯವಾಗುವಂತಹ ವ್ಯವಸ್ಥೆಯನ್ನು ತಕ್ಷಣವೇ ರೂಪಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಚಡಚಣ, ದುರ್ಗಪ್ಪ ಬೂದಿಹಾಳ, ವಿಕ್ರಮ ವಾಘಮೋರೆ, ರಾಕೇಶ ಇಂಗಳಗಿ, ಪ್ರವೀಣ ಕನಸೇ ಮತ್ತಿತರರು ಇದ್ದರು.

