ಕೂಲ್ ಚಳಿಯೂ, ಹೊದಿಕೆಯ ಸೇವೆಯೂ | ಶಿಕ್ಷಕ ನಾರಾಯಣ ಕುಲಕರ್ಣಿ ಸಾಮಾಜಿಕ ಸೇವೆ ಅನನ್ಯ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಸಂಜೆವಾದರೆ ಸಾಕು ಚಳಿ ಥರಗುಟ್ಟುತ್ತೆ. ಥಂಡಿಗೆ ಮೈಮನ ಮುದುಡಿಕೊಳ್ಳುತ್ತೆ. ಹೀಗಾಗಿ ಬಹುತೇಕ ಸುಸ್ಥಿತರು ಒಂದೆಡೆ ಬಿಸಿಯುತ ಆಹಾರಕ್ಕೆ ಮೊರೆಯಿರಿಸುತ್ತಾರೆ ಇನ್ನೊಂದೆಡೆ ರಾತ್ರಿ ನಿದಿರೆಗೆ ಬೆಚ್ಚನೆಯ ಹೊದಿಕೆ ಬಯಸುತ್ತಾರೆ. ಅನುಕೂಲಸ್ಥ ಜನತೆಗೆ ಇವೆಲ್ಲವೂ ಸುಲಲಿತ ಪ್ರಾಪ್ತಿ! ಆದರೆ ಇಂಥ ವ್ಯವಸ್ಥೆ, ಅನುಕೂಲ ಬಡಬಗ್ಗ ಅನಾಥ ಭಿಕ್ಷುಕರು, ನಿರಾಶ್ರಿತರಿಗೆ ಲಭಿಸುವುದು ಬಲು ಕಷ್ಟ ! ಅವರಿಗೆಲ್ಲ ಇದು ಕನಸಿನ ಮಾತು. ಇಂಥವರ ದಯನೀಯ ಸ್ಥಿತಿಗತಿ ಕಂಡು ಮರುಗುವರು ವಿರಳ ! ನೆರವಿನ ಹಸ್ತ ಚಾಚುವರು ಅಪರೂಪ ! ಈ ಪರಿಯ ಸನ್ನಿವೇಶ ಎಲ್ಲೆಡೆಯೂ ಇಂದು ಕಣ್ಣೆದುರಿಗೆ ಕಾಣುತ್ತಿರುವಾಗ ಪರೋಪಕಾರ ಗುಣ ಸ್ವಭಾವಯುಳ್ಳ ಸಾಮಾಜಿಕ ಸೇವಾಬಿಂಬದೊಂದಿಗೆ ಇಲ್ಲೊಬ್ಬ ಶಿಕ್ಷಕ ಹೊದಿಕೆ ನೆರವಿನ ಸಹಾಯಹಸ್ತ ಚಾಚಿ ಅಪರೂಪದ ಗುರು ಎನಿಸಿಕೊಂಡಿದ್ದಾರೆ!
ಔದಾರ್ಯತೆ ಭಾವದೊಂದಿಗೆ ಮೌಲ್ಯಯುತ ಧಾರಣೆಯ ಮಾನವೀಯತೆ ಸಾರಯುಳ್ಳ ಸಾಮಾಜಿಕ ಸೇವಾ ಮಿಡಿತಕ್ಕೆ ಸದ್ದಿಲ್ಲದೆ ಜಮಖಂಡಿ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ನಾರಾಯಣ ಕುಲಕರ್ಣಿ ಅವರು ಕಳೆದ ಒಂದು ದಶಕದಿಂದ ಸಾಮಾಜಿಕ ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತಾವು ಸಮಪಿ೯ಸಿಕೊಂಡಿದ್ದಾರೆ.
ಈ ಶಿಕ್ಷಕನ ಸೇವಾ ಕಳಕಳಿ ವಿಭಿನ್ನ ಮಾದರಿಯಾಗಿದೆ. ನಿರ್ಗತಿಕರಿಗೆ ಹೃದಯ ತೆರೆದು ರಾತ್ರಿಯಿಡೀ ಸಂಚರಿಸಿ ಹೊದಿಕೆ ಸೇವೆ ಗೈದು ಅಸಹಾಯಕರ ಮೊಗಭಾವದಲ್ಲಿ ನೆಮ್ಮದಿ ನೊರೆಪೊರೆ ಬೀರಿದ್ದಾರೆ. ಖುಷಿ ತೃಣ ಸೃಷ್ಟಿಸಿದ್ದಾರೆ. ಅಪರೂಪಮಯ ಸೇವಾ ಕಳಕಳಿಗೆ ಸಾಕ್ಷಿಯಾಗಿದ್ದಾರೆ !
ನಡುಗುವ ಚಳಿಯಿಂದ ರಾತ್ರಿಯಿಡೀ ರೋಧಿಸಿ ನರಳಾಡುತ್ತಿರುವ ಅಸಹಾಯಕ ಅನಾಥರು, ಭಿಕ್ಷುಕರು, ನಿರಾಶ್ರಿತರನ್ನು ಶೋಧಿಸಿ ಹೊದಿಕೆ ಹಾಸಿಗೆ ಪೂರೈಸುವ ಮಾನನೀಯ ಸೇವಾ ಕೈಂಕರ್ಯದಲ್ಲಿ ಶಿಕ್ಷಕ ನಾರಾಯಣ ಕುಲಕರ್ಣಿ ಮಿಂದಿದ್ದಾರೆ.
ಸಾವಳಗಿ ಮಾತೋಶ್ರೀ ಶ್ರೀ ಶಾರದಾ ಸೇವಾ ಸಮಿತಿ ಹಾಗೂ ರಾಮತೀರ್ಥ ರೋಟರಿ ಸಂಸ್ಥೆ ಸಹಯೋಗದಲ್ಲಿ ನಾರಾಯಣ ಕುಲಕರ್ಣಿ ಅವರೊಂದಿಗೆ ಸಹೃದಯಿ ಭಾವದ ಜೀವಗಳು ಸಾಮಾಜಿಕ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇಂಥದೊಂದು ಅಪರೂಪದ ಸಮಾಜಮುಖಿ ಸೇವಾ ಕಾರ್ಯಕ್ಕೆ ಇಳಿದಿರುವ ಮನುಕುಲದ ಹೃದಯವಂತರು ಚಳಿ,ಗಾಳಿ ಲೆಕ್ಕಿಸದೇ ರಾತ್ರಿಯಿಡೀ ಅನಾಥರನ್ನು,ಭಿಕ್ಷುಕರನ್ನು ಹುಡುಕಿ ಅವರಿಗೆ ಬೆಚ್ಚನೆಯ ಹೊದಿಕೆ ಹೊತ್ತಸಿ ನೆಮ್ಮದಿಯಿಂದ ಮಲಗಿಸಿ ಮಾನವೀಯತೆ ಮೆರೆದಿದ್ದಾರೆ. ಇಂಥ ವಿಶೇಷ ವಿದ್ಯಮಾನಗಳ ಚಳಿಗಾಲದ ನೋಟಗಳು ಜಮಖಂಡಿ ನಗರದಲ್ಲಿ ಕಂಡು ಬರುತ್ತಿವೆ.
ಜಮಖಂಡಿ ನಗರದ ಬಸ್ ನಿಲ್ದಾಣ, ದಗಾ೯, ದೇಗುಲಗಳ ಸುತ್ತ, ಸಾಯಿ ಮಂದಿರ, ಕಡಪಟ್ಟಿ ಎಪಿಎಂಸಿ, ಹುನ್ನೂರ ಮಾರುಕಟ್ಟೆ, ಪುಟ್ಪಾತ್ ರಸ್ತೆ, ದವಾಖಾನೆಗಳ ಅವರಣ ಸೇರಿದಂತೆ ಹಲವಾರು ಬೀದಿ ಬೀದಿಯ ಕಡೆಗಳಲ್ಲಿ ಮೈಕೊರೆಯುವ ಚಳಿಯಲ್ಲಿ ಮದ್ಯರಾತ್ರಿಯಿಡೀ ಸುತ್ತಾಡಿ, ಸಂಚರಿಸಿ ಮನೆಯಿಲ್ಲದೆ ರಾತ್ರಿ ಮಲಗಿದ ಅನಾಥ ,ಭಿಕ್ಷುಕ, ನಿರಾಶ್ರಿತ ಅಸಹಾಯಕರಿಗೆ ಬೆಚ್ಚನೆಯ ಹೊದಿಕೆ ಹೊತ್ತಿಸಿ ಸಾರ್ಥಕ ಸೇವಾ ಭಾವದ ಸಂತೃಪ್ತಿ ಅನವರಣಗೊಳಿಸಿದ್ದಾರೆ ಶಿಕ್ಷಕ ನಾರಾಯಣ ಕುಲಕರ್ಣಿ! ಇವರು ನಡಗುವ ಚಳಿಯಲ್ಲಿ ಮಲಗಿರುವ ನೂರಾರು ನಿರಾಶ್ರಿತರಿಗೆ ಹೊದಿಕೆ ಆಶ್ರಯ ನೀಡಿದ್ದಾರೆ. ಬೆಚ್ಚನೆಯ ರಗ್ಗು, ಬ್ಲ್ಯಾಕೆಂಟ್ ಹೊದಿಸಿ ಮಂಕಿ ಕ್ಯಾಪ್ ಉಡುಪು ತೋಡಸಿ ಅನಾಥರ ನರಳಾಟದ ಕರಾಳ ನಿದ್ರಾಹೀನತೆಗೆ ಮುಕ್ತಿ ಕಾಣಿಸಿದ್ದಾರೆ.ಅವರ ಕಳಾಹೀನ ಮೊಗಭಾವದಲ್ಲಿ ಕೈಲಾದ ಮಟ್ಟಿಗೆ ನೆಮ್ಮದಿ, ಸುಖನಿದ್ರಾ ವ್ಯವಸ್ಥೆ ಕಲ್ಪಿಸಿ ಧನ್ಯತೆ ಮೆರೆದಿದ್ದಾರೆ.
ಈ ಸೇವೆ ನಿಜವಾಗಲೂ ಭಗವಂತನ ಸೇವೆ ಮಾಡಿದಂತಾಗಿದೆ. ಇದರಲ್ಲಿ ತಮಗೆ ಸಂತೃಪ್ತಿಯ ಸದ್ಭಾವನೆ ಇದೆ. ಕಳೆದ ಒಂದು ದಶಕದಿಂದ ಪ್ರತಿ ಚಳಿಗಾಲದಲ್ಲಿ ನಿರಾಶ್ರಿತರಿಗಾಗಿ ನಡೆಸತ್ತಿರುವ ಒಂದು ಚಿಕ್ಕ ಸೇವೆ ಇದಾಗಿದೆ. ಚಳಿಯಲ್ಲಿ ನಮ್ಮೊಟ್ಟಿಗೆ ನಿಂತು ಸಾಮಾಜಿಕ ಸೇವಾ ಮನೋಭಾವದಿಂದ ಕಿರಣ ಜಾಲಿಹಾಳ, ಶ್ರೀನಿವಾಸ ಅಪರಂಜಿ, ಪ್ರಭುಸಿಂಗ ರಜಪೂತ ತಮಗೆ ಸಾಥ್ ನೀಡಿದ್ದಾರೆ. ಇವರ ಸೇವೆಯೂ ಅನುಕರಣೀಯವಾಗಿದೆ. ಚಳಿ ತತ್ತರಕ್ಕೆ ನಲುಗಿದ ನೂರಾರು ನಿರಾಶ್ರಿತರಿಗೆ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಹಾಸಿಗೆ ಹೊದಿಕೆಯ ಬ್ಲ್ಯಾಕೆಂಟ್,ರಗ್ಗು, ಮಂಕಿ ಕ್ಯಾಪ್ ಹಂಚಿಕೆಯನ್ನು ಮಾತೋಶ್ರೀ ಶ್ರೀ ಶಾರದಾ ಸೇವಾ ಸಮಿತಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ಮಾಡಲಾಗಿದೆ ಎಂದು ಶಿಕ್ಷಕ ನಾರಾಯಣ ಕುಲಕರ್ಣಿ ಹೇಳಿದರು.


