ಸಿಂದಗಿ: ಮಕ್ಕಳು ಬೌದ್ಧಿಕವಾಗಿ ಕ್ರಿಯಾಶೀಲರಾಗಿ ಬೆಳೆಯಲು ಬೇಸಿಗೆ ಶಿಬಿರಗಳು ತುಂಬಾ ಸಹಕಾರಿ ಎಂದು ಗುರುದೇವ ಆಶ್ರಮದ ಶಾಂತಗಗಾಧರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗುರುದೇವ ಆಶ್ರಮದ ಸಭಾ ಭವನದಲ್ಲಿ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಏ.10ರಿಂದ 20 ದಿನಗಳ ಕಾಲ ಬೇಸಿಗೆ ಕಲಾಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಾ ಶಿಬಿರಗಳಿಂದ ಮಕ್ಕಳಲ್ಲಿನ ಪ್ರತಿಭೆಗೆ ಅವಕಾಶ ನೀಡಿದಂತಾಗುತ್ತದೆ. ಪಾಲಕರು ಮಕ್ಕಳಿಗೆ ಬರೀ ಓದು ಓದು ಎಂದು ಒತ್ತಡ ಹಾಕದೆ, ಈ ರೀತಿಯ ಕಮ್ಮಟಗಳಿಗೆ ಕಳಿಸುವುದರಿಂದ ನಿಮ್ಮ ಮಕ್ಕಳು ತುಂಬಾ ಚಟುವಟಿಕೆಯಿಂದ ಎಲ್ಲದರಲ್ಲಿ ಮುಂದೆ ಬರುತ್ತಾರೆ ಎಂದರು.
ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಗರಂಜನಿ ಸಂಗೀತ ಅಕಾಡಮಿ ಮುಖ್ಯಸ್ಥ ಡಾ. ಪ್ರಕಾಶ ಮೂಡಲಗಿ ಮಾತನಾಡಿ, ಹಾಡುವ ಮೂಲಕ ಮಕ್ಕಳಿಗೆ ಗಾಯನದ ಬಗ್ಗೆ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ ಪ್ರಾಸ್ತಾವಿಕ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅತ್ಯಂತ ಸರಳವಾಗಿ ಸಮಾರೋಪ ಸಮಾರಂಭ ನಡೆಸಬೇಕಾಯಿತು. ಮುಂದಿನ ಸಾರಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲಾಗುವುದು ಅಂತಾ ಹೇಳಿದರು.
ಶಿಬಿರದಲ್ಲಿ ಭಾಗವಹಿಸಿದ ಅಸ್ಮಿತಾ, ತೇಜಸ್ವಿನಿ, ಸಾಹಿತ್ಯ ನೂಲಾನವರ, ಅನುಶ್ರೀ, ಶ್ರಾವಣಿ, ವೈಷ್ಣವಿ, ಶಿವಾನಂದ, ಅಖಿಲಕುಮಾರ, ಸಾತ್ವಿಕ ನೂಲಾನವರ, ಶಶಾಂಕ ಹಾಡು, ನೃತ್ಯ ಹಾಗೂ ಕಿರುನಾಟಕ ಪ್ರದರ್ಶನ ಮಾಡಿದರು.
ಈ ವೇಳೆ ಶಿಕ್ಷಕರಾದ ಬಸವರಾಜ ಭೂತಿ, ಗುರನಾಥ ಅರಳಗುಂಡಗಿ, ಸಂಗಮೇಶ ಡಿಗ್ಗಿ, ಮಹಾದೇವಿ ನೂಲಾನವರ, ರಶ್ಮಿ ನೂಲಾನವರ, ಫೌಂಡೇಶನ್ ಸದಸ್ಯರಾದ ಮಲ್ಲು ಹಿರೋಳ್ಳಿ, ರೇಣುಕಾ, ಸುದೀಪ ಸೇರಿ ಅನೇಕರು ಉಪಸ್ಥಿತರಿದ್ದರು.
ಸಹನಾ ನಿರೂಪಿಸಿದರು. ಶ್ರೇಯಸ್ ವಂದಿಸಿದರು.