ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಗೆಲ್ಲಿಸಲು ಜಗದೀಶ ಶೆಟ್ಟರ ಕರೆ
ಸಿಂದಗಿ: ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 140-150 ಸ್ಥಾನದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಸಿಂದಗಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯ ನಾಯಕರನ್ನು ಮನೆಗೆ ಕಳುಹಿಸಿ ತಾವು ಹೇಳಿದವರನ್ನು ಒಂದುಗೂಡಿಸುವ ಕಾರ್ಯ ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಖಂಡಿತಅಧಿಕಾರಕ್ಕೆ ಬರುತ್ತೆ. ಕ್ಷೇತ್ರಕ್ಕಾಗಿ, ಕ್ಷೇತ್ರದ ಅಭಿವೃದ್ದಿಗಾಗಿ ದಿ.ಎಂ.ಸಿ.ಮನಗೂಳಿ ಅವರು ಜನರ ಒಳಿತಿಗಾಗಿ ಸದಾ ಶ್ರಮವಹಿಸಿ ಕಾರ್ಯನಿರ್ವಹಿಸಿದ್ದಾರೆ. ಅವರಂತೆ ಅವರ ಸುಪುತ್ರ ಅಶೋಕ ಮನಗೂಳಿ ಮುಂದೆಯೂ ಈ ಕಾರ್ಯ ಹೀಗೆ ಮುಂದುವರೆಸುತ್ತಾರೆ. ಅದಕ್ಕಾಗಿ ಎಲ್ಲ ಸಮುದಾಯದ ಸಹಕಾರ ಅವರಿಗೆ ಅವಶ್ಯಕ. ಈ ಹಿಂದೆ ಬಿಜೆಪಿಯಿಂದ ಬರುತ್ತಿದ್ದ ನಾನು ಇಂದು ಕಾಂಗ್ರೆಸ್ ಪರವಾಗಿ ಮತ ಕೇಳಲು ಬಂದಿದ್ದೇನೆ. ಹಾಗಾಗಿ ಎಲ್ಲ ಸಮಾಜದ ಮತಬಾಂಧವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಆರಿಸಿ ತೆಗೆದುಕೊಂಡು ಬನ್ನಿ, ಮತ್ತೆ ಬಂದು ವಿಜಯೋತ್ಸವದಲ್ಲಿ ಭಾಗವಹಿಸುವೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ಮಾತು ಹೇಳಿದ್ದರು. ಶೆಟ್ಟರ್ ಅವರೆ ನೀವು ಭ್ರಷ್ಟಾಚಾರಿ ಅಲ್ಲ, ಅದಕ್ಕೆ ಬಿಜೆಪಿ ನಿಮಗೆ ಟಿಕೆಟ್ ಕೊಟ್ಟಿಲ್ಲ ಎಂದು. ಅದು ನಿಜ. ಬಿಜೆಪಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಟಿಕೆಟ್ ಸಿಗದಂತೆ ಮಾಡಿತು. ಕ್ಷೇತ್ರದ ಜನತೆಗೂ ಅವಮಾನ ಮಾಡಿದೆ. ಇದೇ ಕಾರಣಕ್ಕೆ ನಾನು ಬಿಜೆಪಿ ಬಿಡಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿವರಿಸಿದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿದರು.
ಈ ವೇಳೆ ವಿಠ್ಠಲ ಕೋಳೂರ, ಮಲ್ಲಣ್ಣ ಸಾಲಿ, ಶರಣಪ್ಪ ವಾರದ, ಗುರಣ್ಣಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಸಿದ್ದಣ್ಣ ಹಿರೆಕುರುಬರ, ಚನ್ನು ವಾರದ, ಗುರಣ್ಣಗೌಡ ಪಾಟೀಲ ನಾಗಾವಿ, ಎಸ್.ಎಂ.ಪಾಟೀಲ ಗಣಿಹಾರ, ಸುನಂದಾ ಯಂಪುರೆ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.