ಲೇಖನ
– ಶ್ರೀಮತಿ ಇಂದಿರಾ ಮೋಟೆಬೆನ್ನೂರ
ಬೆಳಗಾವಿ
ಉದಯರಶ್ಮಿ ದಿನಪತ್ರಿಕೆ
ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ ಸೊನ್ನಲಿಗೆಯ ಸಿದ್ಧರಾಮರು ‘ಕಾಯಕ ಪ್ರತಿನಿಧಿ’ ಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತನಾಮದೊಡನೆ ವಚನಗಳನ್ನು ರಚಿಸಿದ್ದಾರೆ. ಸಿದ್ಧರಾಮರ ಸುತ್ತಲೂ ಪವಾಡಗಳೇ ಹೆಣೆದುಕೊಂಡಿವೆಯಾದರೂ, ಸಂಶೋಧನೆಯ ಫಲವಾಗಿ ದೊರೆತ ಮಾಹಿತಿಯ ಪ್ರಕಾರ ಸಿದ್ಧರಾಮರ ಹುಟ್ಟು ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಸೊನ್ನಲಿಗೆಯ ಮೊರಡಿಯಲ್ಲಿ ಆಯಿತೆಂದು ತಿಳಿದು ಬರುತ್ತದೆ. ಮುದ್ದಗೌಡ ಮತ್ತು ಸುಗ್ಗವ್ವೆ ದಂಪತಿಗಳ ಉದರದಲ್ಲಿ ಅಪರ ವಯಸ್ಸಿನಲ್ಲಿ ಅರಿಷಡ್ವರ್ಗಗಳೆಲ್ಲಾ ಆರುತ್ತಾ, ಪ್ರೇಮದಿಂದ ಪಕ್ವಗೊಂಡ ವಯಸ್ಸಿನಲ್ಲಿ ತೇಜಸ್ವಿಯಾದ ಗಂಡು ಮಗುವೊಂದರ ಜನನವಾಗುತ್ತದೆ. ಕುಡು ಒಕ್ಕಲಿಗರ ಕುಟುಂಬದಲ್ಲಿ ಜನಿಸಿದ ಈ ಬಾಲಕ ಅಪಾರ ತೇಜಸ್ಸನ್ನು ಹೊಂದಿದ್ದು ಮೌನದ ಅಪರಾವತಾರವೇ ಆಗಿದ್ದನು. ಇವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಅನೇಕ ಆಧಾರಗಳು, ವಚನ, ಕಾವ್ಯ, ಶಾಸನ, ಐತಿಹ್ಯಗಳು ದೊರೆಯುತ್ತವೆ. ಹಾಲುಮತಸ್ಥ, ಕುರುಬ ಸಮಾಜಕ್ಕೆ ಸೇರಿದ ರೇವಣಸಿದ್ಧರು ಸುಗ್ಗಲಾದೇವಿಗೆ ನಿನ್ನ ಹೊಟ್ಟೆಯಲ್ಲಿ ಶಿವಯೋಗಿ ಹುಟ್ಟಿ ಬರುತ್ತಾನೆಂದು ಆಶೀರ್ವದಿಸಿದ್ದರಂತೆ. ಹೀಗೆ ರೇವಣಸಿದ್ಧರ ವರದಿಂದ ಹುಟ್ಟಿದರು ಎಂಬ ಐತಿಹ್ಯವಿದೆ. ಇವರ ಪೂರ್ವಾಶ್ರಮದ ಹೆಸರು ‘ಧೂಳಿಮಾಕಾಳು’ ಎಂಬುದಾಗಿದೆ.
ಪುರಾಣ ಕಥೆಯೊಂದರ ಪ್ರಕಾರ, ಸಿದ್ಧರಾಮನು ಒಮ್ಮೆ ಹಸುಗಳನ್ನು ಮೇಯಿಸುವಾಗ ಮಲ್ಲಯ್ಯನೆಂಬ ವ್ಯಕ್ತಿ ಸಿದ್ಧರಾಮರಿಗೆ, ‘ನಿನ್ನನ್ನು ಶ್ರೀಶೈಲಕ್ಕೆ ಕರೆದುಕೊಂಡು ಹೋಗುವೆ, ನಿನ್ನ ತಾಯಿಯಿಂದ ಬುತ್ತಿ ಕಟ್ಟಿಸಿಕೊಂಡು ಬಾ’ ಎಂದು ಹೇಳಿದರಂತೆ. ಶ್ರೀಶೈಲದ ಹೆಸರು ಕೇಳಿದ ತಕ್ಷಣವೇ ಪುಳಕಿತಗೊಂಡ ಸಿದ್ಧರಾಮರು ಅವರೊಡನೆ ಶ್ರೀಶೈಲಕ್ಕೆ ಹೋಗಲು ನಿರ್ಧರಿಸುತ್ತಾರೆ. ತಮ್ಮ ೧೬ ನೆಯ ವಯಸ್ಸಿನಲ್ಲಿ ಶ್ರೀಶೈಲದ ಮಲ್ಲಯ್ಯನನ್ನು ಕಾಣಲು ತನ್ನ ತಾಯಿಯ ಮಮತೆ ಮಮಕಾರವನ್ನು ಗಟ್ಟಿ ಮನಸ್ಸು ಮಾಡಿ ತೊರೆದು ಶ್ರೀಶೈಲಕ್ಕೆ ತೆರಳಲು ನಿಶ್ಚಯಿಸುತ್ತಾರೆ.
ಬುತ್ತಿ ತೆಗೆದುಕೊಂಡು ಬಂದ ಸಿದ್ಧರಾಮರು ಮಲ್ಲಯ್ಯನನ್ನು ಕಾಣದೇ, ‘ತಾಯಿಯನ್ನು ಕಾಣದೇ ಕಂಗೆಟ್ಟ ಶಿಶುವಿನಂತೆ’ ಚಡಪಡಿಸುತ್ತಾ ಮಲ್ಲಯ್ಯನನ್ನು ಅರಸಿ ಹೊರಡುತ್ತಾರೆ. ಶ್ರೀಶೈಲದ ದಾರಿ ಗೊತ್ತಿರದ ಅವರು ಕಾಡುಮೇಡುಗಳನ್ನು ಅಲೆಯುವಾಗ ಯಾತ್ರಿಕರ ತಂಡವೊಂದು ಶ್ರೀಶೈಲಕ್ಕೆ ಸಿದ್ಧರಾಮರನ್ನು ಕರೆದೊಯ್ಯುತ್ತದೆ. ಶ್ರೀಶೈಲದಲ್ಲಿ ಆಗತಾನೇ ಮಜ್ಜನ ಮಾಡಿ, ಮಂಜು ಮುಸುಕಿದ ಬೆಟ್ಟಗಳ ನಡುವೆ ಮಲ್ಲಿಕಾರ್ಜುನನ್ನು ವಿಗ್ರಹ ರೂಪದಲ್ಲಿ ಕಂಡು ಸಿದ್ಧರಾಮರು ನಿರಾಸೆ ಹೊಂದುತ್ತಾರೆ. ತಾನು ಕಂಡ ಮಲ್ಲಯ್ಯನಲ್ಲವೆಂದು ಅಳುತ್ತ ದುಃಖಿಯಾಗುತ್ತಾರೆ.
ವೀರ ವಿರಾಗಿಣಿ ಅಕ್ಕಮಹಾದೇವಿ ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನನ್ನು ‘ಪ್ರಕೃತಿಯನ್ನೆಲ್ಲಾ ನೀವು ಕಂಡಿರಾ? ನೀವು ಕಂಡಿರಾ? ಎನ್ನ ಚೆನ್ನಮಲ್ಲಿಕಾರ್ಜುನನನ್ನು’ ಎಂದು ಅರಸುತ್ತಾ ಸಾಗಿದಂತೆ ಸಿದ್ಧರಾಮರು ಕೂಡಾ ಮಲ್ಲಯ್ಯನನ್ನು ಪ್ರಕೃತಿಯಲ್ಲಿ ಅರಸುತ್ತಾ ಆತನ ದರ್ಶನವಾಗದೇ ಹತಾಶರಾಗುತ್ತಾರೆ. ಮನನೊಂದು ನಿರಾಶರಾಗಿ ತಮ್ಮ ಬಾಳನ್ನು ಕೊನೆಗಾಣಿಸಿಕೊಳ್ಳಬೇಕೆಂದು ಶ್ರೀಶೈಲದ ರುದ್ರಕಮರಿಯ ಬಳಿ ಬಂದು ನಿಲ್ಲುತ್ತಾರೆ. ಇನ್ನೇನು ಕೆಳಗೆ ಬೀಳಬೇಕೆನ್ನುವಷ್ಟರಲ್ಲಿ ಶ್ರೀಶೈಲದ ಮಲ್ಲಿಕಾರ್ಜುನ ದರ್ಶನವಿತ್ತು, ‘ಕಲ್ಯಾಣಕ್ಕೆ ಹೋಗಿ ಚೆನ್ನಬಸವಣ್ಣನವರಿಂದ ದೀಕ್ಷೆ ತೆಗೆದುಕೊಳ್ಳುವಂತೆ’ ನುಡಿಯುತ್ತಾನೆ ಎಂದು ಹೇಳುತ್ತಾರೆ. ಇದೊಂದು ಪುರಾಣ ಕಥೆ ಎನಿಸಿದರೂ ಕೂಡಾ ಇಂಥದೊಂದು ಘಟನೆ ನಡೆದಿರಬಹುದು ಎಂಬುದಕ್ಕೆ ಅವರ ವಚನಗಳು ಮತ್ತು ಸ್ಥಳ ಪುರಾಣಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಸಿದ್ಧರಾಮರು ಪವಾಡ ಪುರುಷರಾಗಿದ್ದರೂ ರುದ್ರಗಮ್ಮರಿ ಸ್ಥಳವನ್ನು ಜನರು ಇಂದಿಗೂ ಶ್ರೀಶೈಲದಲ್ಲಿ ತೋರಿಸುತ್ತಾರೆ.
ಸೊನ್ನಲಾಪುರದಲ್ಲಿ ಕೆರೆ, ಗುಡಿ-ಗುಂಡಾರ ನಿರ್ಮಿಸಿ ಸೊನ್ನಲಿಗೆಯಲ್ಲಿ ದೇವಾಲಯ ಸ್ಥಾಪಿಸಿ ಆವರಣಕ್ಕೆ ‘ಯೋಗ ರಮಣೀಯ ಕ್ಷೇತ್ರ’ ಎಂದು ಹೆಸರಿಸಿದರು. ಕರ್ಮಯೋಗಿ ಸಿದ್ಧರಾಮರು ಜನರನ್ನು ಒಟ್ಟುಗೂಡಿಸಿಕೊಂಡು, ಜನಸಮುದಾಯದ ಬದುಕಿಗೆ ಒಳಿತು ಮಾಡುವ ಕೆರೆ-ಕಟ್ಟೆ, ಬಾವಿ, ಅರವಟ್ಟಿಗೆ ಮುಂತಾದ ಕೆಲಸ ಮಾಡುವವರ ನೇತಾರರಾಗಿದ್ದರು, ಬಯಲಾಡಂಬರ ಕಾರ್ಯಗಳನ್ನು ಕೈಗೊಂಡರು. ಶರೀರವನ್ನು ವ್ಯರ್ಥವಾಗಿ ಕಳೆಯಬಾರದು, ಕೆರೆಕಟ್ಟೆ ಕಟ್ಟುವ ಲೋಕೋಪಯೋಗಿ ಕಾಯಕಗಳಲ್ಲಿ ತೊಡಗಿಸಿಕೊಂಡು ಕರ್ಮಯೋಗಿ ಎನಿಸಿದರು.
ಸೊಲ್ಲಾಪುರದ ನೊಳಂಬ ರಾಣಿ ಚಾಮಲಾದೇವಿಯ ಅರಸೊತ್ತಿಗೆಯಲ್ಲಿ ರಾಜಗುರುಗಳಾಗಿ ಕೆರೆ ನಿರ್ಮಾಣ ಮಾಡಿ ಜನಸೇವೆ ಮಾಡಿ ಕರ್ಮಯೋಗಿ ಆದರು. ‘ಕರ್ಮಯೋಗ’ ಸಂಕ್ಷಿಪ್ತದಲ್ಲಿ ಹೇಳುವುದಾದರೆ, ‘ಸೂರ್ಯ ಚಂದ್ರರ ಉದಯ, ಋತು ಪರಿವರ್ತನೆ, ಗಾಳಿಯ ಬೀಸುವಿಕೆ, ನೀರಿನ ಹರಿಯುವಿಕೆ ಈ ರೀತಿ ಇಡೀ ಲೋಕವೇ ಅಖಂಡ ಚಲನೆಯಿಂದ ಕೂಡಿದೆ. ಜಗತ್ತು ಕರ್ಮ ಮಾಡದೇ ಒಂದು ಕ್ಷಣವೂ ಕೂಡಾ ಬದುಕಿರುವುದಿಲ್ಲ. ಕರ್ಮವೇ ಯೋಗ, ಯೋಗವೇ ಕರ್ಮ. ಕರ್ಮವೆಂದರೆ ಸಾಮಾನ್ಯ ಅರ್ಥದಲ್ಲಿ ಕೆಲಸ ಅಥವಾ ಕಾಯಕ. ಪ್ರತಿ ಕಾಯಕ ಕೂಡಾ ಪೂಜೆಯೇ ಆಗಿದೆ. ಇಂತಹ ಕರ್ಮ ಸಿದ್ಧಾಂತದ ಕರ್ಮಯೋಗಿ ಸಿದ್ಧರಾಮರಾಗಿದ್ದರು’.
ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಸಿದ್ಧರಾಮರು ಮಾಡುತ್ತಿದ್ದರು. ಹಾವು ಕಚ್ಚಿ ಒದ್ದಾಡುತ್ತಿರುವವರು, ಅನಾರೋಗ್ಯಕ್ಕೆ ತುತ್ತಾದವರು, ಅನಾಥ ಶವವಾಗಿ ಬಿದ್ದವರನ್ನು ಅನೇಕ ಶರಣರು ಸಿದ್ಧರಾಮರ ಬಾಗಿಲಿಗೆ ತಂದು ಹಾಕಿ ಹೋಗುತ್ತಿದ್ದರಂತೆ. ಅವರನ್ನೆಲ್ಲ ಉಪಚರಿಸುವ ಕ್ರಿಯಾವಿಧಿಗಳನ್ನು ಅನುಸರಿಸುವ ಗುರುತರವಾದ ಜವಾಬ್ದಾರಿಯನ್ನು ಮುಖ್ಯ ಕಾಯಕವನ್ನಾಗಿ ಸಿದ್ಧರಾಮರು ಮಾಡಿಕೊಂಡಿದ್ದರು ಎಂಬುದನ್ನು ರಾಘವಾಂಕ ವಿರಚಿತ ‘ಸಿದ್ಧರಾಮ ಚರಿತೆ’ ಯಲ್ಲಿ ಉಲ್ಲೇಖಗೊಂಡಿರುವುದನ್ನು ನಾವು ಕಾಣುತ್ತೇವೆ.
ಜನಪದರು ಕಂಡಂತೆ,
ಹಾದಿ ಹಾದಿಗೆ ಗುಡಿಯ, ಬೀದಿ ಬೀದಿಗೆ ಕೆರೆಯ
ಸಾಧಿಸಿದ ಕಟ್ಟಿ ಸಿದ್ಧರಾಮ| ಸೊನ್ನಲಿಗೆ
ಸಾಧು ಸಿದ್ಧನಿಗೆ ಮನೆಯಾಯ್ತು||
ಸಿದ್ಧರಾಮನ ಬಿಮ್ಮು ಬಿದ್ದು ಹೋಯಿತು ಕರಗಿ
ಬುದ್ಧ ಪ್ರಭುದೇವ ತಿಳಿಹೇಳಿ| ಸೊನ್ನಲಿಗೆ
ಸಿದ್ಧ ಶರಣಾದ ಶಿವಮತಕೆ||
ಅಲ್ಲಮ ಸಿದ್ಧರಾಮ ಬಲ್ಲಿದರೆಲ್ಲರು ಬರಲು
ಕಲ್ಯಾಣ ಮನೆಗೆ ಕಳೆ ಬಂತು| ಬಸವಯ್ಯ
ಎಲ್ಲಿ ಹೋದಲ್ಲಿ ಬೆಲ್ಲಾದ||
ಈ ರೀತಿ ಜನಪದರ ಭಾವದಲ್ಲಿಯೂ ಸಿದ್ಧರಾಮರು ಹಾಸುಹೊಕ್ಕಾಗಿದ್ದಾರೆ. ಸಿದ್ಧರಾಮರು ಬಾಳಿದ ಕಾಲ ಕ್ರಿ.ಶ. ೧೧೨೫ ರಿಂದ ಕ್ರಿ.ಶ. ೧೨೦೦ ರವರೆಗೆ, ‘ಅರವತ್ತೊಂದು ಸಾವಿರ ವಚನಗಳ ಹಾಡಿ ಹಾಡಿ ಸೋತಿತೆನ್ನ ಮನ ನೋಡಯ್ಯಾ’ ಎಂದು ಸ್ವತಃ ಸಿದ್ಧರಾಮರೇ ಹೇಳಿಕೊಂಡಿದ್ದರೂ ಕೇವಲ ೧೬೦೦ ರಷ್ಟು ವಚನಗಳು ಮಾತ್ರ ನಮಗೆ ಸಿಕ್ಕಿವೆ ಎಂಬುದು ತಿಳಿದು ಬರುತ್ತದೆ. ‘ಕಪಿಲಸಿದ್ಧ ಮಲ್ಲಿಕಾರ್ಜುನ, ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ, ಕಪಿಲಸಿದ್ಧ ಮಲ್ಲಿನಾಥಾ’ ಎಂಬ ಅಂಕಿತದೊಡನೆ ವಚನಗಳನ್ನು ರಚಿಸಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ಸೊನ್ನಲಿಗೆಗೆ ಬಂದು ಅಲ್ಲಿಯೇ ಐಕ್ಯರಾಗುತ್ತಾರೆ. ಕಲ್ಯಾಣ ಕ್ರಾಂತಿಯ ಸಮಗ್ರ ಹೋರಾಟವನ್ನು ಸಿದ್ಧರಾಮರು ಈ ಒಂದು ವಚನದಲ್ಲಿ ಸೆರೆಹಿಡಿದಿದ್ದಾರೆ.
‘ಎಮ್ಮ ವಚನವೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯ
ಎಮ್ಮ ವಚನ ನೂರೆಂಟು ಅಧ್ಯಯನಕೆ
ಶತರುದ್ರೀಯ ಯಾಗ ಸಮಬಾರದಯ್ಯ
ಎಮ್ಮ ವಚನಗಳು ಸಾಸಿರ ಪಾರಾಯಣಕೆ
ಕಪಿಲಸಿದ್ಧ ಮಲ್ಲಿಕಾರ್ಜುನಾ’
ಶರಣರ ವಚನದ ಒಂದು ಪಾರಾಯಣಕೆ ವ್ಯಾಸಮುನಿಯ ಪುರಾಣದ ಓದುವಿಕೆಯೂ ಸಮಬಾರದಯ್ಯಾ, ಶರಣರ ವಚನಗಳ ಶಕ್ತಿಯೇ ಅಪಾರವಾದದ್ದು ಎಂದಿದ್ದಾರೆ. ‘ನಮ್ಮ ವಚನದ ನೂರೆಂಟು ಅಧ್ಯಯನಕ್ಕೆ ಶತರುದ್ರೀಯ ಯಾಗ ಸಮ ಬಾರದಯ್ಯಾ’
ಸನಾತನಿಗಳ ಶ್ರೇಷ್ಠವಾದ, ಭವ್ಯವಾದ ಯಜ್ಞ ಶತರುದ್ರೀಯ ಯಜ್ಞವಾಗಿದೆ. ಶರಣರ ವಚನಗಳು ಮೌಲ್ಯಕ್ಕೆ ಅದನ್ನು ಹೋಲಿಸಿದರೆ ಅದೂ ಕೂಡ ಕಡಿಮೆಯೇ ಆಗುತ್ತದೆ.
‘ವಚನದ ಸಾವಿರ ಪಾರಾಯಣಕೆ ಗಾಯತ್ರಿ ಲಕ್ಷ ಜಪ ಸಮಬಾರದಯ್ಯಾ’ ಎಂದು ಹೇಳುತ್ತಾರೆ. ವೈದಿಕ ವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಶರಣ ಶಿವಯೋಗಿ ಸಿದ್ಧರಾಮರು ಶರಣರ ವಚನಗಳ ಹಿರಿಮೆ ಗರಿಮೆಯನ್ನು ಈ ವಚನದಲ್ಲಿ ಎತ್ತಿ ಹಿಡಿದಿದ್ದಾರೆ.
ಸೊಲ್ಲಾಪುರದ ನೊಳಂಬ ರಾಣಿ ಚಾಮಲಾದೇವಿಯ ಅರಸೊತ್ತಿಗೆಯಲ್ಲಿ ರಾಜಗುರುಗಳಾಗಿ ಕೆರೆ, ಕಾಲುವೆ ನಿರ್ಮಾಣ ಮಾಡಿ, ಜನಸೇವೆ ಮಾಡಿ ಕರ್ಮಯೋಗಿಯಾದರು. ಈ ಎಲ್ಲ ಕಾರ್ಯದಲ್ಲಿ ಹಾವಿನಹಾಳ ಕಲ್ಲಯ್ಯನವರು ಜೊತೆಯಾಗಿದ್ದರು. ಸಿದ್ಧರಾಮ ವಚನ, ಸ್ವರ ವಚನ, ಬಸವ ಸ್ತೋತ್ರದ ತ್ರಿಪದಿ, ಅಷ್ಟಾವರಣ ಸ್ತೋತ್ರದ ತ್ರಿಪದಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ವಚನ ಮತ್ತು ಸ್ವರ ವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂಬ ಅಂಕಿತವಿದ್ದರೆ, ತ್ರಿವಿಧಗಳಲ್ಲಿ ‘ಯೋಗಿನಾಥ’ ಎಂಬ ಅಂಕಿತವಿದೆ.
ಅಣ್ಣ ಬಸವಣ್ಣನವರ ಬಗ್ಗೆ ಸಿದ್ಧರಾಮರು ಬರೆದಷ್ಟು ಬೇರೆ ಯಾವ ಶರಣರೂ ಬರೆದದ್ದು ನಮಗೆ ಕಂಡು ಬರುವುದಿಲ್ಲ. ‘ಇದು ಸ್ತುತಿಯಲ್ಲ, ಸಾಮಾಜಿಕ ಚಳುವಳಿಯಲ್ಲಿನ ಋಣಭಾರವನ್ನು ಕಡಿಮೆ ಮಾಡಿಕೊಳ್ಳುವ ಪರಿಪಾಠವಷ್ಟೇ’ ಎಂದು ನುಡಿದಿದ್ದಾರೆ ಸಿದ್ಧರಾಮರು.
ಸಿದ್ಧರಾಮರ ಜೀವನದಲ್ಲಿ ಎರಡು ಪ್ರಮುಖ ಘಟ್ಟಗಳನ್ನು ನಾವು ಕಾಣುತ್ತೇವೆ.
೧. ಕಲ್ಯಾಣಕ್ಕೆ ಬರುವ ಮುನ್ನ ಸೊನ್ನಲಾಪುರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು.
೨. ಅಲ್ಲಮರು ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆತಂದ ನಂತರ ಶರಣರ ಜೊತೆ ಆಧ್ಯಾತ್ಮಿಕ ಯೋಗ ಸಾಧನೆಗೆ ಮುಂದಾಗಿರುವುದು.
ಅಲ್ಲಮರ ಆಗಮನ
ಸೊನ್ನಲಿಗೆಯಲ್ಲಿ ಲೋಕಕಲ್ಯಾಣ ಕಾರ್ಯ ಮಾಡುತ್ತಿದ್ದ ಸಿದ್ಧರಾಮರನ್ನು ಕಲ್ಯಾಣ ಶರಣರ ಸಂಕುಲಕ್ಕೆ ಕರೆದೊಯ್ಯಲು ಬಂದ ಅಲ್ಲಮರು ಅಲ್ಲಿ ಕೆರೆ ಕಟ್ಟುತ್ತಿರುವ ಒಡ್ಡ ಜನಾಂಗದವರಿಗೆ ನಿಮ್ಮ ಒಡ್ಡ ರಾಮನೆಲ್ಲಿ ಇರುವನು? ಎಂದು ಪ್ರಶ್ನಿಸಿದರಂತೆ. ಸಿದ್ಧರಾಮರಿಗೆ ಆ ಕೆಲಸವನ್ನು ಸೇವಕರು ಬಂದು ಅಲ್ಲಮರ ಆ ನುಡಿಗಳನ್ನು ಅರುಹುತ್ತಾರೆ. ಆಗ ನಡೆದ ಅಲ್ಲಮಪ್ರಭುಗಳು ಹಾಗೂ ಸಿದ್ಧರಾಮರ ಸಂವಾದ / ಸಂಭಾಷಣೆ ವಚನ ಸಾಹಿತ್ಯ ವಲಯದಲ್ಲಿ ಬಹಳ ಪ್ರಸಿದ್ಧವಾಗಿವೆ.
ಅಲ್ಲಮರ ಜೊತೆಗೆ ಕಲ್ಯಾಣಕ್ಕೆ ಪ್ರಯಾಣ ಬೆಳೆಸುತ್ತಾರೆ ಸಿದ್ಧರಾಮರು. ಅನುಭವ ಮಂಟಪಕ್ಕೆ ಪ್ರವೇಶಿಸಿದ ತಕ್ಷಣವೇ ಹಿಂದೆ ತಮ್ಮನ್ನು ಕಲ್ಯಾಣಕ್ಕೆ ಕರೆತರಲು ಬಸವಣ್ಣನವರು ಸೊನ್ನಲಾಪುರಕ್ಕೆ ಬಂದು ಪ್ರಯತ್ನಿಸಿದ್ದನ್ನು ಸ್ಮರಿಸಿಕೊಂಡು ಭಾವಪರವಶರಾಗುತ್ತಾರೆ.
‘ಅಂದು ಬಸವಣ್ಣ ಬಂದು ಜರಿದು ಹೋದುದ
ಮರೆದೆನೆ ಆ ನೋವ|
ಜರಿಗದುದೆ ಎನಗೆ ದೀಕ್ಷೆಯಾಯಿತ್ತು|
ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ
ಬಸವಣ್ಣನೆನ್ನ ಪರಮಾರಾಧ್ಯ|’ಎಂದು ನುಡಿದಿದ್ದಾರೆ. ಸೊನ್ನಲಾಪುರಕ್ಕೆ ಬಂದ ಬಸವಣ್ಣನವರು ಸಿದ್ಧರಾಮರನ್ನು ಕಲ್ಯಾಣಕ್ಕೆ ಕರೆದುಕೊಂಡು ಬರುವ ತಮ್ಮ ಪ್ರಯತ್ನದಲ್ಲಿ ಅವರಿಗೆ ಬುದ್ಧಿವಾದ ಹೇಳುತ್ತಾರೆ. ಅದಕ್ಕೆ ‘ಬಸವಣ್ಣನವರು ಬಂದು ಬೈದು ಹೋದುದನ್ನು ನಾನು ಮರೆಯುವೆನೆ? ಅವರು ಬೈದುದ್ದೇ ತನಗೆ ದೀಕ್ಷೆಯಾಯಿತು. ಆ ದೀಕ್ಷೆಯಿಂದ ಫಲಪದ ಅಂದರೆ ಲೌಕಿಕ ವಿಚಾರಗಳಿಂದ ದೂರವಾದೆನು’ ಎಂದು ಹೇಳುತ್ತಾರೆ.
ಅಲ್ಲಮರು ಸಿದ್ಧರಾಮರನ್ನು ಕರೆದುಕೊಂಡು ಬಂದರೂ ಸಹಿತ ಬಸವಣ್ಣನವರೇ ಗುರು, ಲಿಂಗ, ಜಂಗಮ ಪ್ರತೀಕವಾಗಿದ್ದನ್ನು ಪರಮಾರಾಧ್ಯರಾಗಿದ್ದನ್ನು ನಾವು ಕಾಣುತ್ತೇವೆ. ಬಸವಣ್ಣನವರ ವ್ಯಕ್ತಿತ್ವದ ಪ್ರಭಾವ ಎಷ್ಟು ಗಾಢವಾಗಿತ್ತೆಂದರೆ ‘ಬಸವ ಸ್ತೋತ್ರ ತ್ರಿವಿಧಿ’ ಎಂಬ ಗ್ರಂಥವನ್ನು ಸಿದ್ಧರಾಮರು ರಚಿಸುತ್ತಾರೆ.
‘ಬಸವಣ್ಣನೇ ತಾಯಿ,
ಬಸವಣ್ಣನೇ ತಂದೆ,
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ..’
ಎಂದು ಬಸವಣ್ಣನವರನ್ನು ಮನದುಂಬಿ ನೆನೆದಿದ್ದಾರೆ. ಬಸವಾಕ್ಷ ಮಂತ್ರವನ್ನೇ ಅವರು ಬದುಕಿದರು ಎಂದು ಹೇಳಬಹುದು.
‘ಬಸವನ ಮೂರ್ತಿಯೇ ಧ್ಯಾನಕೆ ಮೂಲ
ಬಸವನ ಕೀರ್ತಿಯೇ ಧ್ಯಾನಕೆ ಮೂಲ
ಬಸವ ಬಸವ ಬಸವ ಎಂಬುದು ಭಕ್ತಿ ಕಾಣಾ
ಕಪಿಲಸಿದ್ಧ ಮಲ್ಲಿಕಾರ್ಜುನಾ’
‘ಬಸವನ ಮೂರ್ತಿ’ ಅಂದರೆ ಲಿಂಗ ಸಮಾಜ. ಸಮಾಜವನ್ನು ಸಂಘಟಿಸಿ ಕಾಯಕ ದಾಸೋಹದ ಮಹಾಮಂತ್ರವನ್ನು ಜಪಿಸಿ, ಕಾರ್ಯರೂಪಕ್ಕೆ ತಂದ ಬಸವಣ್ಣ ಭಕ್ತಿಯ ಪ್ರತಿರೂಪವಾಗುತ್ತಾರೆ. ಈ ರೀತಿ ಬಸವಣ್ಣನವರ ಪ್ರಭಾವ ಸಿದ್ಧರಾಮರ ಮೇಲೆ ಬಹಳಷ್ಟು ಆಗಿತ್ತೆಂಬುದನ್ನು ನಾವು ಕಾಣುತ್ತೇವೆ.
ಕರ್ಮಯೋಗಿ, ಶಿವಯೋಗಿ ಶ್ರೀ ಸಿದ್ಧರಾಮರು ವೈವಿಧ್ಯಮಯ ವಚನ ರಚನೆ ಮಾಡಿ ಕಲ್ಯಾಣ ಕ್ರಾಂತಿಯಲ್ಲಿ ಶರಣ ಚಳುವಳಿಯಲ್ಲಿ ಮಹತ್ತರ ಪಾತ್ರ ವಹಿಸಿದರು. ಹೆಣ್ಣು ಕುಲಕ್ಕೇ ತಲೆಬಾಗಿದ ಶಿವಯೋಗಿ ಸಿದ್ಧರಾಮರು
‘ತಾನು ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು
ತಾನು ಮಾಡಿದ ಹೆಣ್ಣು ತನ್ನ ತೊಡೆಯನ್ನೇರಿತ್ತು
ತಾನು ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನ್ನೇರಿತ್ತು
ತಾನು ಮಾಡಿದ ಹೆಣ್ಣು ನಾರಾಯಣನ ಎದೆಯನ್ನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ..’ಅನುಭವ ಮಂಟಪದ ಪೂರ್ವದಲ್ಲಿನ ಮಹಿಳೆಯರ ಸ್ಥಿತಿಯು ಶೂದ್ರ ಅಸ್ಪೃಶ್ಯರಂತೆ ಹೀನವಾಗಿ ಚಿಂತಾಜನಕವೇ ಆಗಿತ್ತು. ಸ್ತ್ರೀಯರನ್ನು ಪುರುಷ ಸಮಾನವಾದ ಅಧಿಕಾರ, ಅಂತಸ್ತುಗಳಿಂದ ಸಾಮಾಜಿಕ ವ್ಯವಸ್ಥೆಯು ದೂರ ಉಳಿಸಿತ್ತು. ಮಹಿಳೆ ಕೇವಲ ಅಡುಗೆ ಮನೆ, ಹೆರಿಗೆ ಮನೆಗಳಿಗೆ ಮಾತ್ರ ಸೀಮಿತಳಾಗಿದ್ದಳು. ಬಹುಶಃ ಪರಾವಲಂಬಿಯಾಗಿ ಬದುಕುತ್ತಿದ್ದ ಈ ಕಾರಣಕ್ಕಾಗಿಯೇ ಮಹಿಳೆಯನ್ನು ಪುರುಷ ಸಮಾಜವು ‘ಅಬಲೆ’ ಎಂದು ಕರೆದಿರಬಹುದು.
೧೨ ನೆಯ ಶತಮಾನದವರೆಗೂ ಅನೇಕ ನಿಷ್ಠುರ ಕಷ್ಟ ಕಾರ್ಪಣ್ಯ, ಕಟ್ಟಳೆಗಳ ನಡುವೆ ದಾರುಣವಾದ ಸ್ಥಿತಿಯಲ್ಲಿ ನರಳುತ್ತಾ, ಎಡವಿ ಮುಗ್ಗರಿಸುತ್ತಾ ನಡೆದುಕೊಂಡು ಬರುತ್ತಿರುವಾಗ ಶಿವಶರಣರ ಸಮೂಹ ಅವಳನ್ನು ಕೈಹಿಡಿದೆತ್ತಿ ಮುನ್ನಡೆಸಿದ್ದನ್ನು, ಹೆಣ್ಣಿಗೆ ಒಂದು ಪರಮೋಚ್ಛ ಸ್ಥಾನವನ್ನು ನೀಡಿ ಗೌರವಿಸಿದ್ದನ್ನು ಆ ಶಿವಶರಣರ ವಚನಗಳಲ್ಲಿ ನಾವು ಕಾಣುತ್ತೇವೆ. ಧಾರ್ಮಿಕ ಸಂಸ್ಥೆಯಾದ ಅನುಭವ ಮಂಟಪದಲ್ಲಿ ಗಂಡಿನ ಸರಿಸಮಾನ ಸ್ಥಾನ ನೀಡಿ ಗೌರವಿಸಿದ್ದು ಕ್ರಾಂತಿಕಾರರ ಮಹತ್ತರವಾದ ಹೆಜ್ಜೆ ಆಗಿದೆ.
ಸೊನ್ನಲಿಗೆಯ ಸಿದ್ಧರಾಮೇಶ್ವರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಹೆಣ್ಣು ಕೇವಲ ಹೆಣ್ಣಲ್ಲ, ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’ ಎಂದು ಹೇಳಿ ಹೆಣ್ಣಿಗೆ ದೇವರ ಪರಮೋಚ್ಛ ಸ್ಥಾನಮಾನ ನೀಡಿ ಗೌರವಿಸಿದ್ದಾರೆ.
೮೦೦ ವರ್ಷಗಳ ಪೂರ್ವದಲ್ಲಿ ಕಂಡುಬಂದಂತಹ ಪ್ರಗತಿಶೀಲ ವಿಚಾರಧಾರೆಯಾಗಿದೆ. ಹೆಣ್ಣಿನಲ್ಲಿ ಅಡಕವಾಗಿರುವ ವಾತ್ಸಲ್ಯ, ಸಹನೆ, ಪರಿಶ್ರಮ, ಸಮರ್ಪಣಾಭಾವ, ತ್ಯಾಗ ಈ ಗುಣಗಳಿಗೆ ನೀಡಿದ ಗೌರವಾರ್ಪಣೆಯಾಗಿದೆ.
ದೇವಾನುದೇವತೆಗಳೂ ಕೂಡ ಹೆಣ್ಣನ್ನು ವೈಯಕ್ತಿಕವಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಅವಳನ್ನು ಪ್ರತಿಷ್ಠಾಪಿಸಿ ಗೌರವ ತೋರಿದ್ದಾರೆ.
ಕೇವಲ ಶಾರೀರಿಕವಾಗಿ ಬಲಹೀನಳು ಎಂಬ ಕಾರಣವನ್ನೇ ಮುಂದೊಡ್ಡಿ, ಪುರುಷಬಲ ಪ್ರತಿಪಾದಿಸಿ, ಅವಳನ್ನು ಅಪವಿತ್ರ, ಬಹಿಷ್ಠೆ ಎಂದು ಎಲ್ಲ ಹಕ್ಕುಗಳಿಂದ ವಂಚಿತ ಮಾಡುವ ಹುಚ್ಚು ಮನಸುಗಳಿಗೆ ಏನೆನ್ನಬೇಕು?
ಎಲೆ ಮರೆಯ ಕಾಯಂತೆ, ಪ್ರತ್ಯಕ್ಷ ಇಲ್ಲವೆ ಅಪ್ರತ್ಯಕ್ಷವಾಗಿ ಹೆಣ್ಣು ಗಂಡಿನ ಸಾಧನೆಗೆ ಪೂರಕವಾಗುತ್ತಾಳೆ, ಪ್ರೇರಕ ಶಕ್ತಿಯಾಗುತ್ತಾಳೆ, ಸ್ಫೂರ್ತಿಯಾಗುತ್ತಾಳೆ ಎಂದು ಹೇಳಬಹುದು. ಇದನ್ನೇ ಸಿದ್ಧರಾಮರು ಈ ವಚನದಲ್ಲಿ ಹೆಣ್ಣಿಗೆ ದೇವರ ಸ್ಥಾನವನ್ನು ನೀಡಿ ಬಹಳ ಮಾರ್ಮಿಕವಾಗಿ, ಸೂಚ್ಯವಾಗಿ, ಸೂಕ್ಷ್ಮವಾಗಿ ಪ್ರತಿಪಾದಿಸಿದ್ದಾರೆ. ಹುಟ್ಟಿದ ಮನೆಗೂ, ಕೊಟ್ಟ ಮನೆಗೂ ಹೂವ ತರುವ ಸಮಸ್ತ ಹೆಣ್ಣು ಕುಲಕ್ಕೇ ತಲೆಬಾಗಿ ಮಣಿದು ವಂದಿಸಿದಂತಿದೆ ಶಿವಯೋಗಿ ಸಿದ್ಧರಾಮರ ಈ ವಚನ.
ಹೆಣ್ಣಿನ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯುವ ಉನ್ನತ ಭಾವವು ಸಿದ್ಧರಾಮೇಶ್ವರರ ವಚನದಲ್ಲಿ ವ್ಯಕ್ತವಾಗಿದೆ ಎನ್ನುವುದನ್ನು ನಾವು ಕಾಣುತ್ತೇವೆ.
ಭಕ್ತಿಯಲ್ಲಿ ತೊಡಗಿರುವವರು, ಆಧ್ಯಾತ್ಮಿಕ ಸಾಧನೆಯಲ್ಲಿ ಮುಳುಗಿರುವವರು ಹೆಣ್ಣಿನಿಂದ ತೊಂದರೆಯೇ ಹೆಚ್ಚೆಂದು ಭಾವಿಸುವುದು ಸಾಮಾನ್ಯ ದೃಷ್ಟಿಕೋನ. ಆದರೆ ಸಿದ್ಧರಾಮರು ಈ ವಚನದಲ್ಲಿ ಪುರಾಣದ ಕೆಲವು ನಿದರ್ಶನಗಳ ಮೂಲಕ ದೇವರೇ ಹೆಣ್ಣಿನ ಸಂಗವನ್ನು, ಸಾಂಗತ್ಯ, ಸಹಚರ್ಯ, ಸಹಯೋಗ ಬಯಸುವಾಗ, ಐಹಿಕ ಹೆಣ್ಣು ಗಂಡಿನ ಭೋಗದ ವಸ್ತುವಾಗುವುದಿಲ್ಲ, ಆಕೆ ದೈವ ಸ್ವರೂಪ ಎಂದು ಹೇಳುತ್ತಾರೆ. ಶರಣರು ಹೆಣ್ಣನ್ನು ಉನ್ನತ ಸ್ಥಾನದಲ್ಲಿಟ್ಟು ಗೌರವಿಸಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿ ನಿಲ್ಲುತ್ತದೆ.
ಆಕರ ಗ್ರಂಥಗಳು
೧. ವಚನ ಸಂಪುಟ-೧
೨. ಅಂತರ್ಜಾಲ ಮಾಹಿತಿ


