ವೃಕ್ಷಥಾನ್ ಹೆರಿಟೇಜ್ ರನ್-2024ರ ಕೋರ್ ಕಮಿಟಿ ಪೂರ್ವಭಾವಿ ಸಭೆಯಲ್ಲಿ ಡಾ.ಮಹಾಂತೇಶ ಬಿರಾದಾರ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ರ ಕೋರ್ ಕಮಿಟಿ ಪೂರ್ವಭಾವಿ ಸಭೆ ನಗರದಲ್ಲಿ ಶುಕ್ರವಾರ ಮುಸ್ಸಂಜೆ ನಡೆಯಿತು.
ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಭೆಯಲ್ಲಿ ಕೋರ್ ಕಮಿಟಿ ನಾನಾ ವಿಭಾಗಗಳ ಪದಾಧಿಕಾರಿಗಳು ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು ಮತ್ತು ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ವೃಕ್ಷಥಾನ್ ಹೆರಿಟೇಜ್ ರನ್ ಗೆ ದಿನಗಣನೆ ಆರಂಭವಾಗಿದ್ದು, ಸಾಕಷ್ಟು ಮುಂಚಿತವಾಗಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಬಡ ಮತ್ತು ಪ್ರತಿಭಾವಂತ ಯುವಕರು 21 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳಲು ಆಸಕ್ತಿ ಹೊಂದಿದ್ದರೆ ಅವರಿಗೆ ನೋಂದಣಿ ಶುಲ್ಕವನ್ನು ಪ್ರಾಯೋಜಕರು ಭರಿಸಲಿದ್ದಾರೆ ಎಂದು ತಿಳಿಸಿದರು.
ಕಳೆದ ಬಾರಿಗಿಂತ ಈ ಬಾರಿ ಇನ್ನೂ ಚೆನ್ನಾಗಿ ಈ ಓಟ ಆಯೋಜನೆಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಶ್ರಮಿಸೋಣ. ಓಟದಲ್ಲಿ ಪಾಲ್ಗೊಳ್ಳಲು ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವ ಖ್ಯಾತ ಓಟಗಾರರು, ಸೇನೆಯ ಯೋಧರು ಸೇರಿದಂತೆ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಈಗಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು. ಹಲವು ಬರಿಗಾಲಿನಲ್ಲಿ ಓಡುವುದರಿಂದ ರಸ್ತೆಗಳನ್ನು ಪರಿಶೀಲಿಸಬೇಕು. ಹೆರಿಟೇಜ್ ರನ್ ನಡೆಯುವ ಮುನ್ನಾ ದಿನ ನಡೆಯುವ ಸಭೆಯ, ಕಾರ್ಯಕ್ರಮದ ರೂಪುರೇಷೆಗಳ ಕುರಿತು ಈಗಲೇ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.
ನೋಂದಣಿ ಸಮಿತಿಯ ಡಾ.ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ ಮತ್ತು ಅಪ್ಪು ಭೈರಗೊಂಡ ಮಾತನಾಡಿ ಈಗಾಗಲೇ ಹೆಸರು ನೋಂದಾಯಿಸಿರುವ ಅಂಕಿ- ಸಂಖ್ಯೆಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಗ್ರುಪ್ ರಜಿಸ್ಟ್ರೇಶನ್ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಸಾಂಸ್ಕೃತಿಕ ಸಮಿತಿಯ ಶಿವನಗೌಡ ಪಾಟೀಲ ಮಾತನಾಡಿ, ಓಟಗಾರರಿಗೆ ಚಿಯರ್ ಅಪ್ ಮಾಡಲು ನಾನಾ ಕಲಾವಿದರ ತಂಡಗಳನ್ನು ಗುರುತಿಸಲಾಗಿದೆ. ಓಟಗಾರರು ಸಾಗುವ ಆಯಕಟ್ಟಿನ ಸ್ಥಳಗಳಲ್ಲಿ ಈ ಕಲಾ ತಂಡಗಳು ಕ್ರೀಡಾಪಟುಗಳನ್ನು ಹುರುದುಂಬಿಸಲಿದ್ದಾರೆ ಎಂದು ತಿಳಿಸಿದರು.
ವೇದಿಕೆ ಸಮಿತಿಯ ಆಕಾಶ ಚೌಕಿಮಠ ಮತ್ತು ಅಮಿತ ಬಿರಾದಾರ ಮಾತನಾಡಿ, ಕ್ರೀಡಾ ಮಳಿಗೆಗಳು, ಓಟ ಪ್ರಾರಂಭ ಮತ್ತು ಮುಕ್ತಾಯ, ಮೆಡಲ್ ವಿತರಣೆ, ಮುಖ್ಯ ವೇದಿಕೆ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಪದಾಧಿಕಾರಿಗಳಾದ ಮುರುಗೇಶ ಪಟ್ಟಣಶೆಟ್ಟಿ, ಜಗದೀಶ ಪಾಟೀಲ, ಅಶ್ಪಾಕ್ ಮನಗೂಳಿ, ಗುರುಶಾಂತ ಕಾಪಸೆ, ಮಹೇಶ ವಿ. ಶಟಗಾರ, ಪ್ರದೀಪ ಕುಂಬಾರ, ಮಲ್ಲನಗೌಡ ಪಿ. ಕುಪ್ಪಿ, ಪ್ರವೀಣ ಚೌರ, ಸಮೀರ ಬಳಗಾರ, ಶಿವಾನಂದ ಯರನಾಳ, ವೀಣಾ ದೇಶಪಾಂಡೆ, ನವೀದ ನಾಗಠಾಣ, ಶ್ರೀಕಾಂತ ಹಡಲಗೇರಿ ಮುಂತಾದವರು ಉಪಸ್ಥಿತರಿದ್ದರು.