ಮುಖ್ಯಮಂತ್ರಿಗಳು ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು ಎಂದು ಕುಟುಕಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು. ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಮಹಾನಗರ ಪಾಲಿಕೆಗಳ ನೌಕರರ ಕಷ್ಟಕಾರ್ಪಣ್ಯ ಆಲಿಸುವ ಹೃದಯವಂತಿಕೆ ತೋರಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತುರ್ತು ಗಮನ ಹರಿಸಬೇಕು ಎಂದು ಕುಮಾರಸ್ವಾಮಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾಸಕರ ಬಂಡಾಯ ತಣಿಸುವುದಕ್ಕೆ, ಕಾಂಗ್ರೆಸ್ ಪಕ್ಷದಲ್ಲಿನ ಬೇಗುದಿಯನ್ನು ಕಡಿಮೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಮಯವೇ ಸಾಲುತ್ತಿಲ್ಲ. ಇದನ್ನು ನಾನು ತಪ್ಪೆನ್ನಲಾರೆ. ಆದರೆ, ಪಾಲಿಕೆ ನೌಕರರು ಎಸಗಿದ ಪಾಪವೇನು? ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಳಂಬ ಧೋರಣೆ ಯಾಕೆ? ಸ್ವತಃ ಮುಖ್ಯಮಂತ್ರಿ ಅವರೇ ಮಾನವೀಯ ನೆಲೆಗಟ್ಟಿನಲ್ಲಿ ತಕ್ಷಣವೇ ಕ್ರಮ ವಹಿಸುತ್ತಿಲ್ಲ ಏಕೆ? ಹಗಲಿರುಳು ಜನರಿಗಾಗಿ ದುಡಿಯುವ ಅವರ ಬದುಕಿಗೂ ಗ್ಯಾರಂಟಿ ಕೊಡಬೇಕಲ್ಲವೇ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ಪಾಲಿಕೆಗಳ ನಿತ್ಯದ ಯಾವ ಕೆಲಸ ಕಾರ್ಯಗಳು ನಿಲ್ಲಬಾರದು. ಸ್ವಚ್ಛತೆ, ನೈರ್ಮಲ್ಯ ಹಾಗೂ ಸ್ಥಳೀಯ ಆಡಳಿತದ ದೃಷ್ಟಿಯಿಂದ ಪಾಲಿಕೆಗಳು ಮಹತ್ವ ಹೊಂದಿವೆ ಎಂಬುದನ್ನು ಆಡಳಿತಗಾರರು ಮರೆಯಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.