ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಅಪರಾಧ ತಡೆ ಹಾಗೂ ಶಾಂತಿ ಮತ್ತು ಭದ್ರತೆಯ ಸ್ಥಿರತೆಯನ್ನು ಕಾಪಾಡುವಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಪಿಐ ಗುರುಶಾಂತ ದಾಶ್ಯಾಳ ಹೇಳಿದರು.
ತಾಲೂಕಿನ ನರಸಲಗಿ ಗ್ರಾಮದಲ್ಲಿ ಪೊಲೀಸ್ ಇಲಾಖೆಯು ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮದಡಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯ ಮೇಲೆ ಜನರಲ್ಲಿ ನಂಬಿಕೆ ಬೆಳೆಸುವದು. ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸ್ಥಳೀಯ ಜನರ ಸಹಕಾರದಿಂದ ಶಾಂತಿ, ಸುವ್ಯವಸ್ಥೆ ಕಾಪಾಡಬಹುದು. ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟಲು ಸಾಧ್ಯ. ಜನರು ಪೊಲೀಸ್ ಇಲಾಖೆಯ ಬಗ್ಗೆ ಯಾವುದೇ ಭಯ ಪಡಬಾರದು. ಯುವಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸಕಾರಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದರು.
ಸೈಬರ್ ಅಪರಾಧ ಮತ್ತು ನಕಲಿ ಮಾಹಿತಿ ತಡೆಯುವಲ್ಲಿ ನಮ್ಮ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡುವದು ತುಂಬಾ ಮುಖ್ಯವಾಗಿದೆ. ವಿಪತ್ತು ಮತ್ತು ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ನಮ್ಮ ಇಲಾಖೆಯೊಂದಿಗೆ ಸಹಕಾರ ನೀಡುವ ಜೊತೆಗೆ ತಮ್ಮ ಸೇವೆ ನೀಡುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅವ್ವಪ್ಪಗೌಡ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಗುರುನಾಥ ದಳವಾಯಿ, ತಾಪಂ ಮಾಜಿ ಅಧ್ಯಕ್ಷ ಶಾಂತಗೌಡ ಹೊಸಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ವಿದ್ಯಾಧರ ದೊಡ್ಡಮನಿ, ಬಸವರಾಜ ಸರಗನಾಳ, ಮೌಲಾಲಿ ಚಪ್ಪರಬಂದ, ಎಎಸ್ಐ ತಳವಾರ, ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಜಗದೀಶ ತಕ್ಕೋಡ, ಶಿವಬಸಪ್ಪ ಮೊಕಾಶಿ, ಬಿ.ಜಿ.ಅಚನೂರ, ಚಾಂದಸಾಬ ಮುಲ್ಲಾ, ರಮೇಶ ಗೂಳಿ, ರಾಜೇಶ್ವರಿ ಶಿರಮಗೊಂಡ ಇತರರು ಇದ್ದರು.