ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮುಖ್ಯರಸ್ತೆಗಳ ಪಕ್ಕದ ಎರಡು ಬದಿಗಳಲ್ಲಿ ಚಂಡಿಗಳ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಿರುವ ಗೂಡಂಗಡಿಗಳು, ತಳ್ಳು ಬಂಡಿಗಳ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ವಿಜಯಮಹಾಂತೇಶ ಹೂಗಾರ ಮಾಹಿತಿ ನೀಡಿ ಮಾತನಾಡಿ ಪಟ್ಟಣದ ಮುಖ್ಯರಸ್ತೆಗಳ ಚರಂಡಿಗಳು ಒತ್ತುವರಿಯಾಗಿದ್ದರಿಂದ ಚರಂಡಿಗಳ ಸ್ವಚ್ಚತೆ ಮಾಡಲಾಗುತ್ತಿಲ್ಲ, ವಾಹನ ದಟ್ಟಣೆ ನಿಯಂತ್ರಣ ಮಾಡಲಾಗುತ್ತಿಲ್ಲ ಹೀಗಾಗಿ ಪುರಸಭೆ ಅಧ್ಯಕ್ಷೆ ಸುಹಾಸಿನಿ ವಿರೇಶ ಖೇಳಗಿ ಅಧ್ಯಕ್ಷತೆಯಲ್ಲಿ ಕೆಲ ತಿಂಗಳ ಹಿಂದೆ ಸಭೆ ನಡೆಸಲಾಗಿದ್ದು ಸರ್ವ ಸದಸ್ಯರ ಸಮ್ಮತಿಯ ನಂತರ ಠರಾವು ಪಾಸು ಮಾಡಿ ಪಟ್ಟಣದ ಸೂಚಿತ ರಸ್ತೆಗಳ ಒತ್ತುವರಿ ತೆರವು ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳಲಾಯಿತು. ಬಳಿಕ ತೆರವುಗೊಳಿಸುವ ರಸ್ತೆಗಳಲ್ಲಿರುವ ವ್ಯಾಪಾರಿಗಳು, ಸಾರ್ವಜನಿಕರಿಗೆ ನೋಟಿಸ್ ನೀಡಲಾಗಿದ್ದು ಮೈಕ್‌ಗಳ ಮೂಲಕವು ಡಂಗೂರ ಸಾರಿಸಲಾಗಿತ್ತು. ಒತ್ತುವರಿ ತೆರವಿನ ದಿನಾಂಕ ನಿಗದಿಗೊಳಿಸಿದ್ದರಿಂದ ಜುಲೈ ೯ ಮತ್ತು ೧೦ರಂದು ತೆರವು ಕಾರ್ಯಚರಣೆ ಕೈಗೊಂಡಿದ್ದೇವೆ. ಮೊದಲ ದಿನ ಬಸ್ ನಿಲ್ದಾಣದ ಮುಂದಿನ ರಸ್ತೆಯಿಂದ ಕಾರ್ಯಾಚರಣೆ ನಡೆದಿದ್ದು ಬಸವಣ್ಣ ದೇವರ ಗುಡಿ ತನಕ ತಲುಪಿದೆ. ಗುರುವಾರದಂದು ಉಳಿದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಈ ತೆರವು ಕಾರ್ಯಕ್ಕೆ ಪಟ್ಟಣದ ಜನರ ಸಹಕಾರವು ಉತ್ತಮ ರೀತಿಯಲ್ಲಿ ವ್ಯಕ್ತವಾಗುತ್ತಿರುವುದು ಕಾರ್ಯಾಚರಣೆಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಗುಬ್ಬಿಗಳ ಮೇಲೆಕೆ ನಿಮ್ಮ ಬ್ರಹ್ಮಾಸ್ತ್ರ ಎಂದ ವ್ಯಾಪಾರಿಗಳು: ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡ ನಮ್ಮ ಮೇಲೆ ಪದೇ ಪದೇ ಪುರಸಭೆಯವರು ಬ್ರಹ್ಮಾಸ್ತç ಪ್ರಯೋಗ ಮಾಡುತ್ತಾರೆ. ಪಟ್ಟಣದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಮಾಸ್ಟರ್ ಪ್ಲಾನ್ ರೂಪಿಸಿ ಅನಧಿಕೃತ ಕಟ್ಟಡಗಳ ತೆರವುಗೊಳಿಸಬೇಕಿತ್ತು. ಆದರೆ ತಳ್ಳು ಬಂಡಿಗಳೇ ಇವರ ದೃಷ್ಟಿಯಲ್ಲಿ ಒತ್ತುವರಿ ಮಾಡಿ ಪಟ್ಟಣ ಹಾಳು ಮಾಡಿದ್ದಾರೆ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಗೂಡಂಗಡಿ ವ್ಯಾಪಾರಿಗಳಿಂದ ಚರಂಡಿಗೆ ಸಮಸ್ಯೆ ಆಗಿಲ್ಲ, ಆದರೂ ನಮ್ಮನ್ನು ಎಬ್ಬಿಸಿ ಹಾಕುತ್ತಿದ್ದಾರೆ. ನಮ್ಮ ಬದುಕು ಇದೇ ಗೂಡಂಗಡಿಗಳಿಂದ ನಡೆಯುತ್ತಿದೆ, ಹೀಗಾಗಿ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುವುದರಿಂದ ಪಟ್ಟಣದ ಸಮಗ್ರ ಅಭಿವೃದ್ದಿ ಆಗುವುದಿಲ್ಲ. ಪುರಸಭೆಯವರಿಗೆ ಪಟ್ಟಣದ ಅಭಿವೃದ್ದಿಯ ಕಾಳಜಿ ಇದ್ದರೆ ಮಾಸ್ಟರ್ ಪ್ಲಾನ್ ಮಾಡಿ ಶಾಶ್ವತ ನಗರ ಯೋಜನೆ ರೂಪಿಸಿ ಶಾಶ್ವತ ಪರಿಹಾರ ಕಂಡುಕೊಂಡರೆ ನಾವು ಕೂಡ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಪಟ್ಟಣದ ಮುಖಂಡರನ್ನು ಮುಂದಿಟ್ಟುಕೊಂಡು ಅಧಿಕಾರಿಗಳೆದುರು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಸೋಮಲಿಂಗ ಒಡೆಯರ್, ಆರೋಗ್ಯ ನಿರೀಕ್ಷಕರಾದ ಸಂಜಯಕುಮಾರ, ಆಸೀಫ್ ಸೇರಿದಂತೆ ಪುರಸಭೆ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ವ್ಯಾಪಾರಸ್ಥರು, ಪಟ್ಟಣದ ನಾಗರಿಕರು ಇದ್ದರು.