ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ವಿಜಯಪುರ ಜಿಲ್ಲಾ ಮಟ್ಟದ ಸಂವಾದ ಸಭೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಹಾಗೂ ನೀರಾವರಿಯಂತಹ ಅನೇಕ ಯೋಜನೆಗಳ ಪೂರಕ ವರದಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಆಯೋಗದ ಅಧ್ಯಕ್ಷರನ್ನಾಗಿ ಮಾಡಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ವರದಿ ಪೂರಕವಾಗಿರಲಿ ಎಂದರು.
ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ನೀರಾವರಿಯಂತಹ ಅನೇಕ ಯೋಜನೆಗಳನ್ನು ರೂಪಿಸಿ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಸರ್ಕಾರದ ಯೋಜನೆಗಳ ಲಾಭ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಲು ಅಧಿಕಾರಿಗಳು ಬದ್ದತೆಯಿಂದ ಕಾರ್ಯನಿರ್ವಹಿಸಬೇಕು. ಆರೋಗ್ಯ ವಲಯಕ್ಕೆ ಮತ್ತುಷ್ಟು ಆದ್ಯತೆ ಸೇರಿದಂತೆ ಶಿಕ್ಷಣ ಹಾಗೂ ಆರೊಗ್ಯ ಕ್ಷೇತ್ರಗಳ ಮೂಲಭೂತ ಸೌಲಭಯ ಕಲ್ಪಿಸಲು ಸಮಿತಿ ಶಿಪಾರಸ್ಸು ಮಾಡಲು ತಿಳಿಸಿದರು.
ಸಮಿತಿಯ ಸದಸ್ಯರಾದ ಡಾ.ಎಸ್.ಟಿ.ಬಾಗಲಕೋಟೆ ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ, ಹೈನುಗಾರಿಕೆ, ಕೈಗಾರಿಕೆ, ಸೇವಾ ಕ್ಷೇತ್ರ ಹಾಗೂ ಸಾಮಾಜಿಕ ವಲಯಗಳು ಸೇರಿದಂತೆ ವಿವಿಧ ಮಾನದಂಡಗಳ ಆಧಾರ ಮೇಲೆ ಹಿಂದುಳಿದ ತಾಲೂಕುಗಳ ಅಬಿವೃದ್ದಿಗೆ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯಾದ್ಯಂತ ಅಧ್ಯಯನ ಕೈಗೊಂಡಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ ಎಂದರು.
ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಯೋಜನೆ ಹಾಗೂ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರು, ನಗರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕಾಗಿ ಮಹಿಳಾ ವಿವಿಯ ರಜಿಷ್ಟ್ರಾರ್ ಶಂಕರಗೌಡ ಸೋಮನಾಳ ಅವರ ಕೋರಿಕೆಗೆ ಸಕಾರತ್ಮಕವಾಗಿ ಸ್ಪಂದಿಸಿ, ಮಹಿಳಾ ಸಬಲೀಕರಣಕ್ಕೆ ಒತ್ತು ಹಾಗೂ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಈ ಅಗತ್ಯತೆಯನ್ನು ಸಮಿತಿ ಗಮನಿಸಿದೆ ಎಂದು ಹೇಳಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಸಂಗೀತಾ ಎನ್.ಕೆ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿ.ಪಂ ಉಪ ಕಾರ್ಯದರ್ಶಿ ವಿಜಯ ಆಜೂರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಆರ್ಥಿಕ ತಜ್ಞರು, ಕೃಷಿ ತಜ್ಞರು ಉಪಸ್ಥಿತರಿದ್ದರು.