ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ, ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ದಾಂಪತ್ಯ ಎಂಬುದು ಕೇವಲ ಹೂವಿನ ಹಾಸಿಗೆಯಲ್ಲ.. ಸಮಾಜ ಒಪ್ಪಿದ ರೀತಿಯಲ್ಲಿ ಒಂದು ಜೋಡಿ ಗಂಡು ಹೆಣ್ಣು ಮದುವೆ ಎಂಬ ಸುಮಧುರ ಬಂಧದಲ್ಲಿ ಒಂದಾಗಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಸುಖದಲ್ಲಿ ದುಃಖದಲ್ಲಿ ಜೊತೆಯಾಗಿ ಸಾಗುವ ದಂಪತಿಗಳ ಬದುಕಿನಲ್ಲಿ ಸಾಕಷ್ಟು ತೊಂದರೆಗಳು, ನೋವುಗಳು, ಆರ್ಥಿಕ ಪಡಿಪಾಟಲುಗಳು, ಸಂತಸ, ದುಃಖ ಹೀಗೆ ಹತ್ತು ಹಲವಾರು ಕಂತೆಗಳು ಇರುತ್ತವೆ. ಜೀವನ ನಮ್ಮೆಡೆಗೆ ಎಸೆಯುವ ಪ್ರತಿ ಸವಾಲಿಗೂ, ಪ್ರತಿ ಸಂಕಷ್ಟದ ಗಳಿಗೆಗೂ, ಪ್ರತಿಯೊಂದು ಒತ್ತಡಭರಿತ ತೊಂದರೆಗಳನ್ನು ದಂಪತಿಗಳು ಎದುರಿಸಲೇಬೇಕಾಗುತ್ತದೆ.
ಆದರೆ ಜೀವನದ ಎಲ್ಲಾ ಸುಖ ದುಃಖಗಳಲ್ಲಿ ನಿಮಗೆ ಹೆಗಲು ಕೊಟ್ಟು ಎಲ್ಲವನ್ನು ನೀಗಿಸಿಕೊಂಡು ಹೋಗುವ ಸಂಗಾತಿ ಇದ್ದರೆ ಬದುಕು ಭಾರವೆನಿಸುವುದಿಲ್ಲ.ಒಬ್ಬರಿಗೊಬ್ಬರು ಜೊತೆಯಾಗಿ
ಬದುಕಿನ ಎಲ್ಲ ಬವಣೆಗಳನ್ನು ನೀಗಿಕೊಂಡು ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ, ಚೈತನ್ಯ ಶಕ್ತಿಯಾಗುತ್ತಾರೆ.
ಒಬ್ಬರಿನ್ನೊಬ್ಬರ ಭಾರವನ್ನು ಹೊರುವ ಮೂಲಕ ಪ್ರೀತಿಯ ನವ ಪರಿಭಾಷೆಯನ್ನು ಬರೆಯುತ್ತಾರೆ. ಹಲವಾರು ಬಾರಿ ಸೋತರೂ ಜೊತೆಯಾಗಿ ಗೆಲ್ಲುತ್ತಾರೆ. ಒಬ್ಬರಿಗೊಬ್ಬರು ಪರಸ್ಪರ ಸಹಾಯವಾಗಿ ಬದುಕುತ್ತಾರೆ. ಜೀವನದ ಕಠಿಣ ಸವಾಲುಗಳನ್ನು ಎದುರಿಸುವಾಗ ಸರಿಯಾದ ವ್ಯಕ್ತಿ ಜೊತೆಗಿದ್ದರೆ ಅದರ ವಿಶೇಷತೆಯೇ ಬೇರೆ.
ಮದುವೆಗೆ ಮುನ್ನ ಪರಸ್ಪರರ ಆಸೆ ಆಕಾಂಕ್ಷೆಗಳ ಕುರಿತು ಮಾತ್ರ ಮಾತನಾಡುವ, ಬಣ್ಣ ಬಣ್ಣದ ಕನಸುಗಳನ್ನು ಹೆಣೆಯುವ, ಪ್ರೀತಿ ಪ್ರೇಮದ ಮಧುರ ಸಲ್ಲಾಪದ, ಪ್ರಣಯದ ಬೆಚ್ಚನೆಯ ಭಾವಗಳು ತಂದೊಡ್ದುವ ಮಧುರಾನುಭೂತಿಗೆ ಕೊನೆಯೇ ಇರುವುದಿಲ್ಲ.
ಒಂದೊಮ್ಮೆ ಪಾಣಿಗ್ರಹಣವಾಗಿ ಮಧುಚಂದ್ರವನ್ನು ಪೂರೈಸಿ ಮನೆಗೆ ಮರಳುವ ದಂಪತಿಗಳಿಗೆ ಬದುಕು ತನ್ನ ಮತ್ತೊಂದು ಮಗ್ಗುಲನ್ನು ತೋರುತ್ತದೆ. ಅದುವರೆಗೂ ದೂರದಿಂದಲೇ ಪರಸ್ಪರರ ಕುರಿತು ಅರಿತಿದ್ದೇವೆ ಎಂದುಕೊಂಡವರು ಇದೀಗ ಅವರೊಂದಿಗೆ ಬದುಕುವಾಗ ನಿಜವಾದ ಸತ್ವ ಪರೀಕ್ಷೆ ಆರಂಭವಾಗುತ್ತದೆ.
ಪುರುಷನಾದರೆ ಪತ್ನಿಯ ಯೋಗಕ್ಷೇಮವನ್ನು, ಆರ್ಥಿಕ ಅವಶ್ಯಕತೆಗಳನ್ನು ನೋಡಿಕೊಳ್ಳುವುದು ಆತನ ಕರ್ತವ್ಯ. ಕೆಲವೊಮ್ಮೆ ತನ್ನ ಪಾಲಕರ ಮತ್ತು ಒಡಹುಟ್ಟಿದವರ ನಿರ್ಲಕ್ಷ್ಯ,ಅಸಮಾಧಾನದ ಬಿಸಿ ಪತ್ನಿಗೆ ತಾಕದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಆತನದ್ದೆ ಆಗಿರುತ್ತದೆ.
ತಾನು ಹುಟ್ಟಿ ಬೆಳೆದ ಪರಿಸರ, ತಂದೆ-ತಾಯಿ, ಬಂಧು ಬಳಗವನ್ನು ಬಿಟ್ಟು ಬಂದಿರುವ ಆಕೆಯನ್ನು ಎಲ್ಲ ರೀತಿಯಿಂದ ರಕ್ಷಿಸುವುದು ಪತಿಯ ಮೊದಲ ಆದ್ಯತೆಯಾಗಿರಬೇಕು. ಬೇರೆಯವರು ತನ್ನ ಪತ್ನಿಯನ್ನು ಹೀಯಾಳಿಸುವ, ಅವಮಾನಿಸುವ ಮೂಲಕ ಮನೆಯ ವಾತಾವರಣ ಬಿಗಡಾಯಿಸದಂತೆ ನೋಡಿಕೊಳ್ಳುವುದು ಪುರುಷನ ಜವಾಬ್ದಾರಿ ಆಗಿರುತ್ತದೆ.
ದಾಂಪತ್ಯ ಎಂಬ ಪವಿತ್ರ ಬಂಧನದಲ್ಲಿ ಬಂಧಿಯಾದ ಪ್ರತಿಯೊಬ್ಬ ಪುರುಷನು ತನ್ನ ಪತ್ನಿಯನ್ನು ಮೊದಲ ಆದ್ಯತೆಯನ್ನಾಗಿಸಿಕೊಳ್ಳಬೇಕು. ಆಕೆಯೊಂದಿಗೆ ಜೀವಮಾನವಿಡಿ ಜೊತೆಯಾಗಿ ಕಳೆಯುವ ಬದ್ಧತೆಗೆ ಒಳಗಾಗುವ ಪುರುಷ ಕೇವಲ ಆಕೆಯನ್ನು ಪ್ರೀತಿಸುವ ಮತ್ತು ಇಚ್ಛೆಯನ್ನು ಪೂರೈಸಿಕೊಳ್ಳುವ
ಸಾಧನವೆಂಬಂತೆ ಪರಿಗಣಿಸದೆ ಆಕೆಯ ಭಾವನಾತ್ಮಕ ಮತ್ತು ಮಾನಸಿಕ ಬೆಂಬಲ ನೀಡಬೇಕು.
ತನ್ನ ಪತ್ನಿ ಮತ್ತು ತನ್ನ ಕುಟುಂಬದ ನಡುವೆ ಸಿಕ್ಕು ಬೀಳುವ ಬಹಳಷ್ಟು ಪುರುಷರು ಇವರಿಬ್ಬರನ್ನು ಬೇರೆ ಎಂದು ಪರಿಗಣಿಸದಂತಹ ವಾತಾವರಣವನ್ನು ಕುಟುಂಬದಲ್ಲಿ ಸೃಷ್ಟಿಸಬೇಕು. ಪತಿಯಾಗಿ ತಮ್ಮ ಪತ್ನಿಯ ಅವಶ್ಯಕತೆಗಳನ್ನು ಪೂರೈಸುವುದು ತನ್ನ ಕುಟುಂಬಕ್ಕೆ ತಾನೆಸಗುವ ದ್ರೋಹ ಎಂದು ಭಾವಿಸದೆ ಆರೋಗ್ಯಕರ ಗಡಿಗಳನ್ನು ಹಾಕಿಕೊಳ್ಳುವ ಮೂಲಕ ಪರಸ್ಪರ ಗೌರವ ಮತ್ತು ಸಾಮರಸ್ಯವನ್ನು ನಿಶ್ಚಲತೆ ಮತ್ತು ಪ್ರೀತಿ ಎರಡಕ್ಕೂ ಧಕ್ಕೆಯಾಗದಂತೆ ಉಳಿಸಿಕೊಳ್ಳುವುದು ಒಳ್ಳೆಯದು..
ಮೊದಮೊದಲು ತನ್ನ ಮೇಲಿನ ನಿರ್ಲಕ್ಷವನ್ನು ಸಹಿಸುವ ಪತ್ನಿ ಮುಂದಿನ ದಿನಮಾನಗಳಲ್ಲಿ ಪತಿಯ ಮೇಲಿನ ನಂಬಿಕೆ, ಆತ್ಮೀಯತೆ ಮತ್ತು ಗೌರವವನ್ನು ಕಳೆದುಕೊಳ್ಳುತ್ತಾಳೆ
ಸತತವಾಗಿ ಹೀಯಾಳಿಸುವುದು, ಎಲ್ಲ ವಿಷಯಗಳಲ್ಲೂ ಮೂಗು ತೂರಿಸುವುದು, ಹಸ್ತಕ್ಷೇಪ ಮಾಡುವುದರ ಮೂಲಕ (ಆಕೆ ನಿಮ್ಮವಳೆ ಆದಾಗ್ಯೂ ಕೂಡ) ಪತ್ನಿಯ ವೈಯುಕ್ತಿಕ ಸ್ವಾತಂತ್ರ್ಯವನ್ನು ಕಳೆಯಬಾರದು. ಪತಿಗೃಹ ಆಕೆಯ ಪಾಲಿಗೆ ಒಂದು ಪವಿತ್ರ ನಿವಾಸ ಎಂಬಂತೆ ಭಾಸವಾಗಬೇಕು. ಪತಿಯ ಸಾಂಗತ್ಯದಲ್ಲಿ ಆಕೆ ಸುರಕ್ಷತೆಯನ್ನು, ಗೌರವ ಮತ್ತು ಚೇತೋಹಾರಿ ಸಂಬಂಧವನ್ನು ಕಂಡುಕೊಳ್ಳಬೇಕು. ಅನವಶ್ಯಕ ಸಂಘರ್ಷಗಳು ವಾದ ವಿವಾದಗಳು ದಂಪತಿಗಳ ನಡುವಿನ ಸಂಬಂಧದಲ್ಲಿ ಬಿರುಕನ್ನುಂಟು ಮಾಡುತ್ತವೆ ಎಂಬುದು ನೆನಪಿನಲ್ಲಿರಬೇಕು.
ದಂಪತಿಗಳು ಕೈಗೊಳ್ಳುವ ಎಲ್ಲಾ ನಿರ್ಧಾರಗಳು ತಮ್ಮ ಕುಟುಂಬದ ಒಳಿತಿಗಾಗಿ ಎಂಬುದನ್ನು ಮನೆಯವರು ಮತ್ತು ಸಂಗಾತಿಗೆ ಮನಗಾಣಿಸಬೇಕು.
ಪತ್ನಿಯಾಗಿ ಬರುವ ಪ್ರತಿಯೊಬ್ಬ ಹೆಣ್ಣು ಮಕ್ಕಳು ಗಂಡನನ್ನು ಕೇವಲ ತನಗಾಗಿ ಮೀಸಲು ಎಂಬಂತೆ ಭಾವಿಸಬಾರದು.ಮನೆಯ ಎಲ್ಲಾ ಸದಸ್ಯರೊಂದಿಗೆ ಒಳ್ಳೆಯ ಭಾಂದವ್ಯವನ್ನು ಕಾಯ್ದುಕೊಳ್ಳುವ ಮೂಲಕ ಪತಿಯ ಪ್ರೀತಿ ವಿಶ್ವಾಸ ನಂಬಿಕೆಯನ್ನು ಗಳಿಸಿ ಆ ಮನೆಯವರಲ್ಲಿ ಒಂದಾಗಿ ಬೆರೆಯಬೇಕು.
ತನ್ನ ತವರಿನ ಸ್ಥಾನಮಾನ, ಆಸ್ತಿ-ಅಂತಸ್ತುಗಳನ್ನು ಗಂಡನ ಮನೆಯ ಜೊತೆ ಹೋಲಿಸದೆ ಪ್ರೀತಿ ವಿಶ್ವಾಸದಿಂದ ಬದುಕಬೇಕು.
ಏಟಿಗೆ ಏಟು, ಮಾತಿಗೆ ಮಾತು ಎಂಬಂತೆ ಕಡ್ಡಿ ತುಂಡು ಮಾಡಿದಂತಹ ವರ್ತನೆ ಸಲ್ಲದು. ಈ ಹಿಂದಿನಂತೆ ಯಾರೂ ಕೂಡ ಮನೆಗೆ ಬರುವ ಸೊಸೆಯನ್ನು ನಡೆಸಿಕೊಳ್ಳುವುದಿಲ್ಲವಾದ ಕಾರಣ
ಆಕೆಯೂ ಕೂಡ ತನಗೆ ದೊರೆಯುವ ಪತಿಯ ಮನೆಯ ಎಲ್ಲಾ ಗೌರವಾದರಗಳಿಗೆ ತಕ್ಕಂತೆ ವರ್ತಿಸಬೇಕು.
ಅಂತಿಮವಾಗಿ ದಾಂಪತ್ಯ ಎಂಬ ದೀವಿಗೆಯನ್ನು ಚಿರಕಾಲ ಬೆಳಗಲು ದಂಪತಿಗಳಿಬ್ಬರು ಅದಕ್ಕೆ ಪ್ರೀತಿಯ ಎಣ್ಣೆ, ನಂಬಿಕೆಯ ಬತ್ತಿ ಮತ್ತು ಎಂದೂ ಕೊನೆಯಾಗದ ವಿಶ್ವಾಸ ಎಂಬ ನಂದದ ದೀಪವನ್ನು ಹಚ್ಚಿ ಕಾಯ್ದುಕೊಳ್ಳುವ ಮೂಲಕ ಮಕ್ಕಳೆಂಬ ಮೌಲ್ಯಗಳ ಬೆಳಕಿನ ಪ್ರಭೆಯನ್ನು ಸಮಾಜಮುಖಿಯಾಗಿ ಪಸರಿಸಬೇಕು.