ಪಿಡಬ್ಲೂಡಿ ಇಲಾಖೆಯ ಪತ್ರ ನಿರ್ಲಕ್ಷಿಸಿ ರಸ್ತೆಯ ಪಕ್ಕ ಅಳವಡಿಸಿದ ಪೈಪಲೈನ್ | ಪೈಪಲೈನ್ ಅಳವಡಿಕೆ ಪ್ರದೇಶದಲ್ಲಿ ಮಳೆಗಾಲದಲ್ಲಿ ವಾಹನ ಸಿಕ್ಕಿಕೊಳ್ಳುವ ಆತಂಕ | ಎಚ್ಚರಿಸಿದ ಗ್ರಾಮಸ್ಥರ ಮೇಲೆ ದೂರು ದಾಖಲು
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸರ್ಕಾರದ ನಿರ್ದೇಶನ ಪಾಲಿಸದೇ ಜಿಲ್ಲಾ ಮುಖ್ಯರಸ್ತೆಯ ಬದಿಯಲ್ಲಿ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸುವ ಮೂಲಕ ಜಲಧಾರೆ ಕಾಮಗಾರಿ ಕೈಗೊಂಡಿರುವ ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಹಾಗೂ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮೂಲಕ ತಾಳಿಕೋಟೆ ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಯಲ್ಲಿ ಜಲಧಾರೆ ಕಾಮಗಾರಿಯ ಪೈಪಲೈನ್ ರಸ್ತೆ ಪಕ್ಕವೇ ಅಳವಡಿಸಿದ್ದು ಸರ್ಕಾರದ ನಿಯಮ ಹಾಗೂ ಲೋಕೋಪಯೋಗಿ ಇಲಾಖೆಯ ಪತ್ರವನ್ನು ಗಾಳಿಗೆ ತೂರಿದೆ. ಈ ಬಗ್ಗೆ ಮುಖಂಡ ನಾನಾಗೌಡ ಬಿರಾದಾರ(ಗೊಟಗಣಕಿ) ಮಾತನಾಡಿ, ಸರ್ಕಾರ ಯಾವುದೇ ಜಿಲ್ಲಾ ರಸ್ತೆಯ ಮಧ್ಯೆ ಭಾಗದಿಂದ ೧೫ ಮೀ ಅಂತರದಲ್ಲಿ ಪೈಪಲೈನ್ ಕಾಮಗಾರಿ ಕೈಗೊಳ್ಳತಕ್ಕದ್ದು ಎಂಬ ಸ್ಪಷ್ಟ ನಿರ್ದೇಶನವಿದೆ. ಆದರೆ ಹಂಚಲಿ ಗ್ರಾಮದ ಹತ್ತಿರ ಜಲಧಾರೆ ಕಾಮಗಾರಿಯನ್ನು ರಸ್ತೆಪಕ್ಕವೇ ಕೈಗೊಂಡಿದ್ದು ಪೈಪಲೈನ್ ಅಳವಡಿಸಿದ್ದಾರೆ. ಇದು ಸರ್ಕಾರದ ನಿರ್ದೇಶನಕ್ಕೆ ವಿರುದ್ಧವಾಗಿರುವುದರ ಜೊತೆಗೆ ಮುಂದಿನ ದಿನಗಳಲ್ಲಿ ಮಳೆಯಾದಾಗ ವಾಹನಗಳು ಅಪಘಾತಕ್ಕೆ ಒಳಗಾಗಲು ಅವಕಾಶ ಕಲ್ಪಿಸಿದಂತಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆ ಸಿಂದಗಿ ಉಪವಿಭಾಗದ ಅಧಿಕಾರಿಗಳು ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದು ಎಚ್ಚರಿಸಿದ್ದರು ಸಹ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಿಂದಗಿ ಉಪವಿಭಾಗದ ಎಇಇ ತಾರಾನಾಥ ರಾಠೋಡ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪೈಪಲೈನ್ ಕಾಮಗಾರಿ ನಡೆಸಿ ಪ್ರಶ್ನಿಸಿದವರ ಮೇಲೆ ದೂರು ನೀಡಿದ್ದಾರೆ.
ಕಳೆದ ೨ ವರ್ಷದ ಹಿಂದೆ ಅಂದಿನ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಸುಸಜ್ಜಿತ ರಸ್ತೆ ನಿರ್ಮಿಸಿ ಅನುಕೂಲ ಮಾಡಿದ್ದರು. ಈಗ ಅವೈಜ್ಞಾನಿಕ ಪೈಪಲೈನ್ ಕಾಮಗಾರಿಯಿಂದ ರಸ್ತೆ ಹಾಳಾಗಿ ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಬೇಕಾಬಿಟ್ಟಿ ಕಾಮಗಾರಿ ಕೈಗೊಳ್ಳುವ ಎಇಇ ತಾರಾನಾಥ ಅವರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣಗೌಡ ಗ್ವಾತಗಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಸುರೇಶಕುಮಾರ ಇಂಗಳಗೇರಿ(ಪೀರಾಪುರ), ಚಿದುಗೌಡ ಬಿರಾದಾರ, ರಮೇಶ ಹಂಚಲಿ ಸಹಿತ ಹಂಚಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

