ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅಂಗವಿಕಲರ ಓಡಾಟದ ಅನುಕೂಲಕ್ಕಾಗಿ ಸರ್ಕಾರ ಉಚಿತವಾಗಿ ನೀಡುವ ಇಂಧನ ಚಾಲಿತ ತ್ರಿಚಕ್ರ ವಾಹನವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಮತ್ತು ಜಾಗರೂಕತೆಯಿಂದ ಚಲಾಯಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತ್ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ೧೪ಜನ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು, ೨೦೨೩-೨೪ನೆಯ ಸಾಲಿನಿಂದ ಇಲ್ಲಿಯವರೆಗೆ ಸಿಂದಗಿ ಮತಕ್ಷೇತ್ರದಲ್ಲಿ ಬರುವ ವಿಕಲಚೇತನರಿಗೆ ಈಗಾಗಲೇ ೨೯ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ. ಜೊತೆಗೆ ವಿಕಲಚೇತನರ ಜಾವನೋಪಾಯಕ್ಕೆ ಉಪಯೋಗವಾಗುವ ೪೮೦ ಕಿಟ್‌ಗಳನ್ನು ಇಲಾಖೆಯ ವತಿಯಿಂದ ಕೊಡಿಸುವ ಕಾರ್ಯವನ್ನು ಸಹ ಮಾಡಲಾಗಿದೆ. ೨೦೨೫-೨೬ನೆಯ ಸಾಲಿನಲ್ಲಿ ೧೪ತ್ರಿಚಕ್ರ ವಾಹನವನ್ನು ವಿತರಣೆ ಮಾಡಲಾಗಿದೆ. ಇನ್ನೂ ೧೬ ತ್ರಿಚಕ್ರ ವಾಹನಗಳನ್ನು ಮಂಜೂರಾಗಿದ್ದು ಚಳಿಗಾಲ ಅಧಿವೇಶನ ಮುಗಿದ ಬಳಿಕ ವಿತರಣೆ ಮಾಡುವ ಕಾರ್ಯವನ್ನು ಮಾಡುತ್ತೇವೆ. ಕಳೆದ ವರ್ಷ ಆಲಮೇಲದಲ್ಲಿ ವಿಕಲಚೇತನರು ಹಮ್ಮಿಕೊಂಡ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭವನಕ್ಕಾಗಿ ಬೇಡಿಕೆಯನಿಟ್ಟಿದ್ದರು. ಅವರ ಬೇಡಿಕೆಗೆ ಅನುಸಾರವಾಗಿ ಶಾಸಕರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.೨೦ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭೂಮಿ ಪೂಜಾ ಸಮಾರಂಭ ಮಾಡಲಾಗುವುದು ಎಂದರು.
ಈ ವೇಳೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಜಗದೀಶ ಕೆ, ತಾಪಂ ಇಒ ರಾಮು ಅಗ್ನಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟರಗಸ್ತಿ, ತಾಲೂಕು ಕೆಡಿಪಿ ಸದಸ್ಯ ಸುರೇಶ ಚೌಧರಿ, ಅಯ್ಯಪ್ಪ ಕಟ್ಟಿಮನಿ, ಖಾದಿರ್ ಬಂಕಲಗಿ, ಎಂಆರ್‌ಡಬ್ಲೂö್ಯ ಮುತ್ತು ಸತಿಹಾಳ, ಗ್ಯಾರಂಟಿ ಯೋಜನಾ ಸಮಿತಿ ಸದಸ್ಯೆ ಸುನಂದಾ ಯಂಪುರೆ, ಭೀಮು ವಾಲೀಕಾರ, ಐಇಸಿ ಸಂಯೋಜಕ ಭೀಮರಾಯ ಚೌಧರಿ ಸೇರಿದಂತೆ ಅನೇಕರು ಇದ್ದರು.

