ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿಯ ಆರ್‌ಎಂಎಸ್‌ಎ ಶಾಲೆಗೆ ಶಿಕ್ಷಕರ ಕೊರತೆ ಇದ್ದು ತಕ್ಷಣ ಮೂವರು ಶಿಕ್ಷಕರನ್ನು ನಿಯೋಜಿಸಬೇಕು. ತಪ್ಪಿದ್ದಲ್ಲಿ ಎಲ್ಲ ಪಾಲಕರೊಂದಿಗೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವದಾಗಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕ್ಷೇತ್ರ ಶೀಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಎಚ್ಚರಿಸಿದೆ.
ಈ ಬಗ್ಗೆ ಉದಯರಶ್ಮಿ ನ್ಯೂಸ್ ಗೆ ಮಾಹಿತಿ ನೀಡಿದ ಸಮಿತಿ ಸದಸ್ಯ ಹಾಗೂ ಪತ್ರಕರ್ತ ಬಂದೇನವಾಜ ಕುಮಸಿ ಮಾತನಾಡಿ, ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಖಾಯಂ ಶಿಕ್ಷಕರ ಕೊರತೆ ಗಂಭೀರ ಹಂತವನ್ನು ತಲುಪಿದೆ. ಇದರಿಂದ ಶಾಲೆಯ ಶೈಕ್ಷಣಿಕ ಗುಣಮಟ್ಟವೇ ಅಪಾಯದ ಅಂಚಿನತ್ತ ಸಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ, ಗರಿಷ್ಠ ಅಂಕಗಳು ಸೇರಿದಂತೆ ವಿವಿಧ ರಾಜ್ಯ ಮಟ್ಟದ ಸಾಧನೆಗಳನ್ನು ಮಾಡಿ ತಾಲೂಕಿನಲ್ಲಿಯೇ ಮಾದರಿಯಾಗಿ ಹೆಸರುವಾಸಿಯಾದ ಶಾಲೆ ಸಧ್ಯ ಈ ಹಂತಕ್ಕೆ ಬಂದು ತಲುಪಿದ್ದು ಶಿಕ್ಷಣ ಇಲಾಖೆ ಈ ಶಾಲೆಯ ಬಗ್ಗೆ ನಿರ್ಲಕ್ಷ ವಹಿಸಿದಂತಾಗಿದೆ.
ಇಲ್ಲಿನ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಮಾಡಬೇಕಿತ್ತು. ಆದರೆ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವದು ಶಿಕ್ಷಣ ಇಲಾಖೆಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಯಾಗಿದೆ. ವಿಜ್ಞಾನ, ಸಿಬಿಝಡ್ ಆಂಗ್ಲಮಾಧ್ಯಮ ಮತ್ತು ಸಮಾಜ ವಿಜ್ಞಾನ ಈ ಮೂರು ಖಾಯಂ ಶಿಕ್ಷಕರ ಹುದ್ದೆ ಖಾಲಿ ಇದ್ದು, ಸಧ್ಯ ಅತಿಥಿ ಶಿಕ್ಷಕರಿಂದ ನಿರ್ವಹಿಸಲಾಗುತ್ತಿದೆ. ಆದರೆ ಕೆಲಸದ ಒತ್ತಡ ಹೆಚ್ಚು, ಮಾಶಾಸನ ಕಡಿಮೆ ಎಂಬ ಕಾರಣಗಳಿಂದ ಈ ಶಿಕ್ಷಕರು ಮಧ್ಯದಲ್ಲಿಯೇ ಸೇವೆಯಿಂದ ದೂರುವಾಗುತ್ತಿರುವದು ಪಠ್ಯ ನಿರ್ವಹಣೆಯ ಮೇಲೆ ಹೊರೆ ಬೀಳುತ್ತಿದೆ. ಈ ಸಮಸ್ಯೆಗಳನ್ನು ಉಲ್ಲೇಖಿಸಿ ಮನವಿ ನೀಡುತ್ತಿದ್ದೇವೆ. ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತು ಶಿಕ್ಷಕರ ನಿಯೋಜನೆಗೆ ಮುಂದಾಗದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವದು ಅನಿವಾರ್ಯ ಎಂದಿದ್ದಾರೆ.
ಮನವಿ ಪತ್ರವನ್ನು ಕ್ಷೇತ್ರ ಸಮನ್ವಾಧಿಕಾರಿ ಆರ್.ಬಿ.ದಮ್ಮೂರಮಠ ಸ್ವೀಕರಿಸಿದರು.
ಈ ವೇಳೆ ಸಮಿತಿಯ ಅಧ್ಯಕ್ಷೆ ಪೂರ್ಣಿಮಾ ಬೆಳಗಲ್, ಸದಸ್ಯರಾದ ಎಚ್.ಆರ್.ಬಾಗವಾನ, ವೈ.ಎಚ್.ಮ್ಯಾಗೇರಿ ಇದ್ದರು.

