ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಅವರ ಪತ್ನಿ ಆಶಾ ಎಂ. ಪಾಟೀಲ ಅವರು ಮಂಗಳವಾರ ತಿಕೋಟಾ ತಾಲೂಕಿನ ಹಬನೂರ ಎಲ್.ಟಿ ಯಲ್ಲಿ ಪ್ರಚಾರ ಮಾಡುವ ಸಂದರ್ಭ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಅವರ ಬೆಂಬಲಿಗರು ಅಡ್ಡಿಪಡಿಸಿ ದಾಂಧಲೆ ಮಾಡಿರುವುದು ಹೇಡಿತನದ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಖಂಡಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಆಶಾ ಎಂ.ಪಾಟೀಲ ಅವರು ಸೇರಿದಂತೆ ಆ ಸಂದರ್ಭ ಸ್ಥಳದಲ್ಲಿ ಮೂವರು ಮಹಿಳೆಯರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಧ್ವಜವಿರುವ ಬೈಕ್‌ಗಳಲ್ಲಿ ಬಂದ ಕೆಲವು ಪುಂಡರು ಅಸಭ್ಯವಾಗಿ ವರ್ತಿಸಿ ದಬ್ಬಾಳಿಕೆ ನಡೆಸಿದ್ದಾರೆ. ಬೈಕಿನ ಹಾರ್ನ್ ನಿರಂತರ ಹಾಕುತ್ತ,ವಿಜುಗೌಡರ ಪರವಾಗಿ ಘೋಷಣೆ ಕೂಗುತ್ತ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ರಾಜ್ಯದ ಮಾಜಿ ಗೃಹಮಂತ್ರಿಯವರ ಪತ್ನಿಗೇ ಈ ಗತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಇದು ಖಂಡಿತವಾಗಿ ವಿಜುಗೌಡ ಪಾಟೀಲರ ಬೆಂಬಲಿಗರದೇ ಕೃತ್ಯ ಎಂದು ಸಮರ್ಥಿಸಿಕೊಂಡ ತುಂಗಳ ಅವರು, ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡುವುದು ನಾಚಿಕೆಗೇಡಿತನದ ಕೃತ್ಯ. ಇಷ್ಟು ದಿನ ಝಂಡುಬಾಮ್ ಹಚ್ಚಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಿದ್ದರು. ಅದು ಫಲ ಕೊಡದಿದ್ದಾಗ ಈಗ ಪುಂಡಾಟಿಕೆಗೆ ಇಳಿದಿದ್ದಾರೆ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನು ಕಲಿಯಿರಿ, ನಿಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ. ಇನ್ನಾದರೂ ಗೂಂಡಾಗಿರಿ ಮಾಡುವ ಹಳೆಯ ಚಾಳಿ ಬಿಡಿ, ಮೂರು ಸಲ ಕ್ಷೇತ್ರದ ಮತದಾರರು ನಿಮ್ಮನ್ನು ಸೋಲಿಸಿದರೂ ನಿಮಗೆ ಬುದ್ಧಿ ಬಂದಿಲ್ಲ ಎಂದು ವಿದ್ಯಾರಾಣಿ ತುಂಗಳ ತೀವ್ರ ವಾಗ್ದಾಳಿ ನಡೆಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

