ಸಿದ್ದೇಶ್ವರ ಶ್ರೀಗಳ ಜಯಂತ್ಯೋತ್ಸವದಲ್ಲಿ ಇಲಕಲ್-ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಬಿಜ್ಜರಗಿಯಲ್ಲಿ ಅರಳಿದ ಜ್ಞಾನದ ಪುಷ್ಪದ ಹೂವಿನಬಳ್ಳಿ ಜಗತ್ತಿಗೆ ಜ್ಞಾನದ ವಾಸನೆ ನೀಡಿತು. ಒಬ್ಬ ಶಿಕ್ಷಕನ ಕೈಯಲ್ಲಿ ಕಲಿತು ಜಗತ್ತಿಗೆ ಶಿಕ್ಷಕರಾದವರು ಶ್ರೀ ಸಿದ್ದೇಶ್ವರ ಶ್ರೀಗಳು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಸೋಮವಾರ ಸಂಜೆ ನಡೆದ ಶತಮಾನ ಕಂಡ ಶ್ರೇಷ್ಠ ಸಂತ, ನಡೆದಾಡುವ ದೇವರು, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ 84 ನೇಯ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಲಕಲ್ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಇಡೀ ಜಗತ್ತಿಗೆ ಒಂದು ನಕ್ಷತ್ರ. ಜಗತ್ತಿಗೆ ಬೆಳಕು ನೀಡಿದವರು. ಕೋಟ್ಯಾಂತರ ಜನರ ಹೃದಯದಲ್ಲಿ ಜ್ಞಾನದ ಜ್ಯೋತಿ ಹಚ್ಚಿಸಿದವರು. ಅವರ ಬಗ್ಗೆ ವರ್ಣನೆ ಅಸಾಧ್ಯವಾದದ್ದು. ಅವರು ಹುಟ್ಟಿದ ನೆಲ ಪವಿತ್ರ ಕ್ಷೇತ್ರ. ಈ ಹಳ್ಳಿ ಜಗತ್ತಿಗೆ ಪ್ರಸಿದ್ದ ಆಗಿದ್ದು ಶ್ರೀಗಳಿಂದ. ಬುದ್ದ ಮತ್ತು ಅಲ್ಲಮನ ನಂತರ ಶೂನ್ಯ ಸ್ವರೂಪ ಆದವರು ಶ್ರೀಗಳು. ಇವರು ಶತಮಾನದ ಸಂತ ಅಲ್ಲ, ಸಹಸ್ರಮಾನದ ಸಂತ ಎಂದು ಬಣ್ಣಿಸಿದರು.
ಜಾನಪದ ವಿದ್ವಾಂಸ ಪ್ರೋ ಬಿ.ಆರ್.ಪೋಲಿಸ್ ಪಾಟೀಲ ಮಾತನಾಡಿ, ನಿಸರ್ಗ ಪ್ರೀತಿಸುವುದೇ ಶಿಕ್ಷಣ. ಆ ಶಿಕ್ಷಣ ನೀಡುವುದೆ ಶ್ರೀಗಳ ಆಶಯವಾಗಿತ್ತು ಎಂದರು.
ಖ್ಯಾತ ಹಿಂದುಸ್ತಾನಿ ಗಾಯಕ ಡಾ.ಹರೀಶ ಹೆಗಡೆ, ತಿಕೋಟಾ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ದೇಶ್ವರ ಶ್ರೀಗಳ ಸಹೋದರ ಅಮರೇಶ ಪಾಟೀಲ ಮಾತನಾಡಿದರು.
ಸ್ವಾಗತವನ್ನು ಆರ್.ಆರ್.ಮಸಳಿ, ನಿರೂಪಣೆಯನ್ನು ಎಂ.ಡಿ.ತುಳಜಾನ ಮತ್ತು ರಾಜು ಸವದಿ, ವಂದನಾರ್ಪಣೆ ಆರ್.ಎ.ಮಸಳಿ ನೆರವೇರಿಸಿದರು.
ಸುಭಾಸಗೌಡ ಪಾಟೀಲ, ರಾಜು ಮಸಳಿ ಹಾಗೂ ಗ್ರಾಮಸ್ಥರು ಇದ್ದರು.
ಶ್ರೀಗಳ ಭಾವಚಿತ್ರ ಮೆರವಣಿಗೆ, ಸನ್ಮಾನ
ಸಿದ್ದೇಶ್ವರ ಶ್ರೀಗಳ ಪೂರ್ವಾಶ್ರಮದಿಂದ ಶಾಲಾ ಆವರಣದವರೆಗೆ ಎತ್ತಿನ ಗಾಡಿಯಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಉಚಿತ ರಕ್ತದಾನ ಶಿಬಿರ ಗಜಾನನ ಯುವಕ ಮಂಡಳಿಯಿಂದ, ಉಚಿತ ನೇತ್ರದಾನ ಶಿಬಿರ ಅಪ್ಪು ಅಭಿಮಾನಿ ಬಳಗದ ವತಿಯಿಂದ ನಡೆಯಿತು. ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲ ಶಿಕ್ಷಕರಿಗೂ, ಎಂಬಿಬಿಎಸ್ ಆಯ್ಕೆಯಾದ ಆರು ವಿದ್ಯಾರ್ಥಿಗಳಿಗೆ ಶ್ರೀಗಳಿಂದ ಸನ್ಮಾನಿಸಲಾಯಿತು. ಸಿದ್ದೇಶ್ವರ ಅಷ್ಟೋತ್ತರ ಶತ ಜಪಾವಳಿ ದ್ವನಿ ಮುದ್ರಿಕೆ ಬಿಡುಗಡೆಗೊಳಿಸಲಾಯಿತು.
ರೂ.1 ಲಕ್ಷ ದೇಣಿಗೆ
ರವೀಂದ್ರ ಮಲ್ಲಿಕಾರ್ಜುನ ಬಿರಾದಾರ ಅವರು ಅವರ ತಂದೆ ಮಲ್ಲಿಕಾರ್ಜುನ ಅವರ ಹೆಸರಿನಲ್ಲಿ ₹1 ಲಕ್ಷ ದೇಣಿಗೆಯನ್ನು ಅಕ್ಕಮಹಾದೇವಿ ಪ್ರೌಢ ಶಾಲೆಯ ಬಡ ವಿಧ್ಯಾರ್ಥಿನಿಯರ ಅಭಿವೃದ್ಧಿಗಾಗಿ ಬಳಸಲು ಬಸವಲಿಂಗ ಮಹಾಸ್ವಾಮೀಜಿಯವರ ಮೂಲಕ ಚೆಕ್ ಹಸ್ತಾಂತರಿಸಿದರು.

