ಲಾರಿ ಸೇರಿದಂತೆ ಎಲ್ಲ ದೊಡ್ಡ ವಾಹನಗಳು ಸಂಚರಿಸುತ್ತಿವೆಯಾದರೂ ಬಸ್ ಸಂಚಾರವಿಲ್ಲ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ದುರಸ್ತಿ ಸಲುವಾಗಿ ರಸ್ತೆ ಸಂಚಾರ ಸ್ಥಗಿತಗೊಳಿಸಿರುವುದರಿಂದ ಕಳೆದ ನಾಲ್ಕು ತಿಂಗಳಿಂದ ಸಾರಿಗೆ ಸಂಸ್ಥೆಯ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ವಿಜಯಪುರ ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ, ಔರಾದ ಸದಾಶಿವಘಡ ರಾಜ್ಯ ಹೆದ್ದಾರಿ 34, ಅದರಲ್ಲಿ ಬರುವ ಈ ಸೇತುವೆಯ ಮೇಲ್ಭಾಗ ಕಿತ್ತು ಹೋಗಿ ಪ್ರಯಾಣಕ್ಕೆ ಸಂಚಕಾರ ಎದುರಾಗಿತ್ತು.
ಆದ್ದರಿಂದ ಕಳೆದ ಎಪ್ರಿಲ್ 23 ರಿಂದ ಎರಡು ತಿಂಗಳುಗಳ ಕಾಲ ಸೇತುವೆ ದುರಸ್ತಿ ಮಾಡುವ ಸಲುವಾಗಿ ಸಾರಿಗೆ ಸಂಸ್ಥೆಯ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಿಲಾಗಿತ್ತು.
ಸದ್ಯ ದ್ವಿಚಕ್ರ ಹಾಗೂ ಸಣ್ಣ ವಾಹನಗಳನ್ನು ಸೇತುವೆ ಮೇಲೆ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಹಾಗೂ ದೊಡ್ಡ ದೊಡ್ಡ ಲಾರಿಗಳು ಕೂಡ ಸಂಚರಿಸುತ್ತಿವೆ, ಆದರೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದ ನಿತ್ಯ ಸಂಚರಿಸುವ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಸರಕಾರಿ ನೌಕರರಿಗೆ ಸಣ್ಣಪುಟ್ಟ ಕೂಲಿ ಕಾರ್ಮಿಕರಿಗೆ ತೊಂದರೆ ಎದುರಾಗಿದೆ.
ಕೇವಲ ಎರಡು ತಿಂಗಳಲ್ಲಿ ಸೇತುವೆಯ ದುರಸ್ತಿ ಮಾಡಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದರು, ಆದರೆ ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಕೂಡ ಸೇತುವೆ ದುರಸ್ತಿ ಇನ್ನೂ ಪೂರ್ಣಗೊಂಡಿಲ್ಲ.
ಸೇತುವೆಯ ಮೇಲ್ಭಾಗದಲ್ಲಿ ಸಿಮೆಂಟ್ ರಸ್ತೆಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಿದ್ದು, ಎರಡು ಭಾಗದ ತಡೆಗೋಡೆಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ, ಇಂಥ ದೊಡ್ಡ ಸೇತುವೆಯ ತಡೆಗೋಡೆ ಕಾರ್ಯದಲ್ಲಿ ಕೇವಲ 3-4 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಾದರೆ ಸೇತುವೆಯ ದುರಸ್ತಿ ಪೂರ್ಣಗೊಳ್ಳೋದು ಹೇಗೆ ಸಾಧ್ಯ ಎನ್ನುತ್ತಾರೆ ಪ್ರಯಾಣಿಕರು.
ಪ್ರತಿನಿತ್ಯ ಸಿಂದಗಿಯಿಂದ ಅಫಜಲಪುರ ತಾಲೂಕಿಗೆ, ಅಪಜಲಪುರ ತಾಲೂಕಿನಿಂದ ಸಿಂದಗಿ, ಇಂಡಿ, ಆಲಮೇಲ ಭಾಗಕ್ಕೆ ಅನೇಕ ಜನ ನೌಕರರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಸಂಚರಿಸುವುದರಿಂದ ಅವರಿಗೆ ತುಂಬಾ ತೊಂದರೆಯಾಗುತ್ತಿದೆ.
ಹೀಗಾಗಿ ಗುತ್ತಿಗೆದಾರರು ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕೆಲಸ ಪೂರ್ಣಗೊಳಿಸುವಲ್ಲಿ ಮುತುವರ್ಜಿ ವಹಿಸಿ ಜನಸಾಮಾನ್ಯರ ಕಷ್ಟವನ್ನು ಅರಿತುಕೊಳ್ಳುವ ಅಗತ್ಯ ಇದೆ.
ಈ ಕುರಿತು ಲೋಕೋಪಯೋಗಿ ಇಲಾಖೆಯು ಆದಷ್ಟು ಬೇಗನೆ ಸೇತುವೆ ದುರಸ್ತಿ ಮಾಡಿ ಜನರ ಕಷ್ಟಕ್ಕೆ ಸ್ಪಂದಿಸಬೇಕಿದೆ.

