ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ರೈತರ ಜಮೀನುಗಳಿಗೆ ನೀರಾವರಿ ಹಾಗೂ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮುಳವಾಡ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ರವಿ ಗೊಳಸಂಗಿ ನೇತೃತ್ವದಲ್ಲಿ ಕಾರ್ಯಕರ್ತರು ಮತ್ತು ರೈತರು ಆಗ್ರಹಿಸಿದರು.
ಬುಧವಾರ ತಹಶೀಲ್ದಾರ ಸಂತೋಷ ಮ್ಯಾಗೇರಿ ಅವರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಮುಂಗಾರು ಮಳೆ ಕೊರತೆಯಿಂದ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೆಳೆಗಳು ನೀರಿನ ಅಭಾವದಿಂದ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಗೊಂಡಿದೆ. ಈ ಹಿನ್ನೆಲೆ ರೈತರ ಹಿತದೃಷ್ಟಿಯಿಂದ ಮುಳವಾಡ ಏತ ನೀರಾವರಿ ಯೋಜನೆಯ ಎಲ್ಲಾ ಕಾಲುವೆಗಳಿಗೆ ಕೂಡಲೇ ನೀರು ಹರಿಸಿ ಬೆಳೆಗಳನ್ನು ಉಳಿಸಬೇಕು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಆಲಮಟ್ಟಿ ಜಲಾಶಯದಲ್ಲಿ ಸುಮಾರು 95 ಟಿಎಂಸಿ ನೀರು ಸಂಗ್ರಹವಿದ್ದು, ಸಮರ್ಪಕವಾಗಿ ಕಾಲುವೆಗಳಿಗೆ ನೀರು ಹರಿಸಿದರೆ ರೈತರು ಹಾಗೂ ಗ್ರಾಮೀಣ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ನೇತೃತ್ವದಲ್ಲಿ ರೈತರೊಂದಿಗೆ ಸೇರಿ ಕೊಲ್ಹಾರ ತಹಶೀಲ್ದಾರರ ಕಚೇರಿ ಎದುರು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಲೀಂ ಮಮದಾಪೂರ, ಅಶೋಕ ಗಣಿ, ಚೆನ್ನಪ್ಪ ವಾಲಿಕಾರ, ಸುರೇಶ ಸಾರವಾಡ, ಶ್ರೀಧರ ಬೆಳೆಗಾರ, ಧರೆಪ್ಪ ನ್ಯಾಮಗೊಂಡ ಸೇರಿದಂತೆ ಕರವೇ ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.

