ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯಂಕಂಚಿ ಗ್ರಾಮದ ಮಾರ್ಗವಾಗಿ ಸಿಂದಗಿಯೆಡೆಗೆ ಅಕ್ರಮವಾಗಿ ಸಾದಾ ಮರಳು ಸಾಗಾಟ ಮಾಡುತ್ತಿದ್ದ ನಂಬರಿಲ್ಲದ ಟ್ರ‍್ಯಾಕ್ಟರ್ ಹಾಗೂ ಟ್ರೇಲರ್‌ನ್ನು ಸಿಂದಗಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿರುವ ಘಟನೆ ಯಂಕಂಚಿ-ಸಿಂದಗಿ ರಸ್ತೆಯ ಸವಹಳ್ಳದ ಸಮೀಪ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ, ಮೇಲಾಧಿಕಾರಿಗಳ ಸೂಚನೆಯಂತೆ ಸಿಂದಗಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಾಂತ ಕಾಂಬಳೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ ನಂದಶೆಟ್ಟಿ, ವಾಯ್.ಕೆ.ಉಕಮನಾಳ ಕಾರ್ಯಾಚರಣೆ ನಡೆಸಿದರು. ಈ ವೇಳೆ ಯಂಕಂಚಿ ಮಾರ್ಗದಿಂದ ಬರುತ್ತಿದ್ದ ಕುಬೋಟಾ ಕಂಪನಿಯ ನಂಬರಿಲ್ಲದ ಟ್ರ‍್ಯಾಕ್ಟರ್‌ನ್ನು ತಡೆಹಿಡಿಯಲು ಪೊಲೀಸರು ಸೂಚನೆ ನೀಡಿದಾಗ, ಚಾಲಕ ಸ್ವಲ್ಪ ದೂರ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.
ಪಂಚರ ಸಮ್ಮುಖದಲ್ಲಿ ವಾಹನವನ್ನು ಪರಿಶೀಲಿಸಿದಾಗ ಟ್ರೇಲರ್‌ನಲ್ಲಿ ಅಂದಾಜು ಒಂದು ಬ್ರಾಸ್ ಸಾದಾ ಮರಳು ಯಾವುದೇ ಅಧಿಕೃತ ಅನುಮತಿ ಇಲ್ಲದೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಟ್ರ‍್ಯಾಕ್ಟರ್ ಹಾಗೂ ಟ್ರೇಲರ್ ಸೇರಿ ಸುಮಾರು ರೂ.೨ ಲಕ್ಷ ಮೌಲ್ಯದ ವಾಹನ ಹಾಗೂ ರೂ.೪ ಸಾವಿರ ಮೌಲ್ಯದ ಮರಳನ್ನು ಜಪ್ತಿ ಮಾಡಿದ್ದಾರೆ.
ಸ್ಥಳದಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದರೂ ಟ್ರ‍್ಯಾಕ್ಟರ್‌ನ ಚಾಲಕ ಹಾಗೂ ಮಾಲೀಕರ ಗುರುತು ಪತ್ತೆಯಾಗಿಲ್ಲ. ಪರಾರಿಯಾಗಿರುವ ಚಾಲಕ ಹಾಗೂ ವಾಹನದ ಮಾಲೀಕರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ ೨೨೭/೨೦೨೬ರಡಿ ಬಿ.ಎನ್.ಎಸ್.–೨೦೨೩ರ ಕಲಂ ೩೦೩(೨) ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

