ಮಾಜಿ ಪ್ರಧಾನಿ ದೇವೇಗೌಡರ ನಿಲುವಿಗೆ ನನ್ನ ಸಂಪೂರ್ಣ ಬೆಂಬಲ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿಡದಿ ಟೌನ್ ಶಿಪ್ ಯೋಜನೆ ವಿರುದ್ಧ ಮಣ್ಣಿನ ಮಗ ಮಾಜಿ ಪ್ರಧಾನಿಗಳಾದ ದೇವೇಗೌಡರು ವಿಧಾನ ಸೌಧದಲ್ಲಿ ಧರಣಿ ಕೂರುವುದಾಗಿ ಘೋಷಿಸಿದ್ದು, ಅವರ ಈ ನಿಲುವಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಟೌನ್ ಶಿಪ್ ಯೋಜನೆ ರದ್ದುಗೊಳಿಸುವವರೆಗೂ ನಾನೂ ಸಹ ವಿಧಾನಸೌಧದೊಳಗೆ ಧರಣಿ ಕೂರುವುದಾಗಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಘೋಷಿಸಿದ್ದಾರೆ.
ಸಮೃದ್ಧವಾದ ಬಾಳೆ, ತೆಂಗು, ಅಡಕೆ, ತರಕಾರಿ ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ಬೆಳೆಯುವ ಜೊತೆಗೆ ಪ್ರತಿ ತಿಂಗಳು 6 ಲಕ್ಷಕ್ಕಿಂತ ಹೆಚ್ಚು ಲೀಟರ್ ಹಾಲು ನೀಡುವ ಹಚ್ಚ ಹಸಿರಾದ ಸಂಪತ್ಬರಿತ ಸಾವಿರಾರು ಎಕರೆ ಭೂಮಿಯನ್ನು ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ಬಲವಂತದಿಂದ ರೈತರಿಂದ ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇಂತಹ ಭೂಮಿಯಲ್ಲಿ ಟೌನ್ ಶಿಫ್ ಮಾಡುವುದು ಸರಿಯಲ್ಲ.
ಆದ್ದರಿಂದ ಕೂಡಲೇ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಬೇಕು ಹಾಗೂ ಭೂ ಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಹಾಕಿರುವ ಎಲ್ಲ ಕೇಸುಗಳನ್ನು ತಕ್ಷಣ ಹಿಂಪಡೆಯಬೇಕು. ಸರ್ಕಾರ ತನ್ನ ಹಠಮಾರಿತನ ಕೈಬಿಡುವ ವರೆಗೂ ನಮ್ಮ ಹೋರಾಟ ನಿಲ್ಲದು.
ನ್ಯಾಯಯುತ ಹೋರಾಟ ನಡೆಸುತ್ತಿರುವ ಹೋರಾಟದಲ್ಲಿ ಕೇಸು ಹಾಕಿಸಿಕೊಂಡಿರುವ ರೈತರು ಧೃತಿಗೆಡಬೇಕಾಗಿಲ್ಲ. ನಮ್ಮ ಕಾನೂನು ತಂಡ ಅವರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತದೆ. ನಿಮ್ಮ ನ್ಯಾಯುತವಾದ ಹೋರಾಟವನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಹೋರಾಟ ತಾರ್ಕಿಕ ಅಂತ್ಯ ಕಾಣುವ ತನಕ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುವುದಾಗಿ ರೈತರಿಗೆ ಅಭಯ ನೀಡಿದ್ದಾರೆ.

